ದೇವ್‌ನ ಭೂಗತ ಜಗತ್ತಿನಲ್ಲಿ ಕಾಳಿದಾಸನ ಹೆಜ್ಜೆ ಗುರುತು

ದೇವ್‌ನ ಭೂಗತ ಜಗತ್ತಿನಲ್ಲಿ ಕಾಳಿದಾಸನ ಹೆಜ್ಜೆ ಗುರುತು Kalidasa's footprint in the underworld of Dev

ಲೋಕದರ್ಶನ ವರದಿ 

ಅದು 1970ರ ಕಾಲಘಟ್ಟ. ಇಡೀ ಬೆಂಗಳೂರಿನ ಅಂಡರ್‌ವರ್ಡ್‌ ಆಳುತ್ತಾ ಇರುವವ ದೇವ್ (ಸಂಜಯ್ ದತ್). ಕುಸ್ತಿ ಪಟುವಾಗಿದ್ದ ದೇವ್ ದೊಡ್ಡ ರೌಡಿಯಾಗಿ ಬೆಳೆದು ಪೊಲೀಸರ ನಿದ್ದೆ ಕೆಡಿಸುವವನಾಗಿದ್ದ. ದೇವ್‌ನ ಪಕ್ಕಾ ಅಭಿಮಾನಿ ಕಾಳಿದಾಸ (ಧ್ರುವ ಸರ್ಜಾ). ಸೀಮೆ ಎಣ್ಣೆ ಅಂಗಡಿ ಇಟ್ಟುಕೊಂಡು ಉಸ್ತಾದ್ (ದೊಡ್ಡಣ್ಣ)ನ ಕುಸ್ತಿ ಕಣದಲ್ಲಿ ಕೆಲಸ ಮಾಡುತ್ತಾ ಕುಸ್ತಿ ಪಟುಗಳನ್ನು ನೋಡಿ ಕಲಿತವ ಕಾಳಿ. ಒಂದು ಕಾಲದಲ್ಲಿ ಇದೇ ಕಣದಲ್ಲಿ ಪಳಗಿದವ ದೇವ್‌. ಸ್ಕೂಲ್ ಮೇಷ್ಟ್ರು ಆದ ತನ್ನ ಅಣ್ಣ ಧರ್ಮ (ರಮೇಶ್ ಅರವಿಂದ)ನಿಂದ ಸದಾ ಬೈಸಿಕೊಳ್ಳುತ್ತಾ ಲವಲವಿಕೆಯಿಂದ ಜೀವನ ಸಾಗಿಸುತ್ತಿದ್ದ ಕಾಳಿಯ ಜೀವನಕ್ಕೆ ಮಚ್ಚು ಲಕ್ಷ್ಮಿ(ರಿಷ್ಮಾ ನಾಣಯ್ಯ)ಯ ಆಗಮನ ಆಗುತ್ತದೆ. ಹೀಗೆ ಒಂದು ದಿನ ಅಚಾನಕ್ ಆಗಿ ಕುಸ್ತಿ ಕಣದಲ್ಲಿ ದೇವ್ ನನ್ನು ಕಾಳಿ ಸೊಲಿಸುತ್ತಾನೆ. ಈ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಆಗ ಪೊಲೀಸರೇ ದೇವ್‌ನ್ನು ಮುಗಿಸಲು ಕಾಳಿಗೆ ಕೇಳಿಕೊಳ್ಳುತ್ತಾರೆ.  

ದೇವ್‌ನ ಮೇಲೆ ಅಪಾರ ಪ್ರೀತಿ, ಗೌರವ ಹೊಂದಿದ್ದ ಕಾಳಿ ಪೊಲೀಸರ ಈ ಡೀಲ್‌ನ್ನು ಒಪ್ಪಿಕೊಳ್ಳುವುದಿಲ್ಲ. ಹೀಗೆ ಒಂದು ದಿನ ದೇವನ ಹುಡುಗರು ಮಚ್ಚು ಲಕ್ಷ್ಮಿಯ ಮೇಲೆ ಕೈ ಮಾಡಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಇದರ ವಿರುದ್ದ ನಿಲ್ಲುವ ಕಾಳಿ ನ್ಯಾಯ ಕೇಳಲು ದೇವ ಮನೆಗೆ ಹೋಗುತ್ತಾನೆ. ರಾಜಕೀಯದಲ್ಲಿ ಬೆಳೆಯಬೇಕು ಎಂಬ ಆಸೆ ಹೊತ್ತಿದ್ದ ದೇವ್ ಕಾಳಿಯ ಇಡೀ ಕುಟುಂಬವನ್ನು 24 ಗಂಟೆಗಳಲ್ಲಿ ಮುಗಿಸಲು ತನ್ನ ಹುಡುಗರಿಗೆ ಹೇಳುತ್ತಾನೆ. ಈ ಸಂದರ್ಭದಲ್ಲಿ ಕಾಳಿ ಒಬ್ಬಂಟಿಯಾಗಿ ತನ್ನ ಫ್ಯಾಮಿಲಿ ಹೇಗೆ ಕಾಪಾಡಿಕೊಳ್ಳುತ್ತಾನೆ! ದೇವ್‌ನ ವಿರುದ್ದ ಹೊರಾಡಿ ಕಾಳಿದಾಸ ಹೇಗೆ ಕೆಡಿ ಆಗುತ್ತಾನೆ? ಸತ್ಯವತಿ ಮಾಡುವ ಶಪಥ ಏನು? ಎಂದು ತಿಳಿಯಲು ಕೆಡಿ ಸಿನಿಮಾ ನೋಡಲೇ ಬೇಕು. 

ಈವರ್ಷ ತೆರೆಗೆ ಬಂದ ಸಿನಿಮಾಗಳಲ್ಲಿ 'ಕೆಡಿ' ಒಂದು ಅತ್ಯುತ್ತಮ ಸಿನಿಮಾ ಆಗುವ ಭರವಸೆ ಕೊಡಬಹುದು. ಅಷ್ಟು ಅಚ್ಚುಕಟ್ಟಾಗಿ ಚಿತ್ರವಿದೆ. ಪ್ರಾರಂಭದ ಕೆಲವೊಂದಿಷ್ಟು ನಿಮಿಷ ಪ್ರೇಕ್ಷಕರು ತಡೆದುಕೊಂಡರೆ, ಮುಂದೆ ಸೀಟಿನ ತುದಿಯಲ್ಲಿ ಕುಳಿತುಕೊಂಡು ಸಿನಿಮಾ ನೋಡುವಂತೆ ಮಾಡುತ್ತದೆ. ನಿರ್ದೇಶಕ ಪ್ರೇಮ್ ಶೋಮ್ಯಾನ್ ಎಂಬ ಬಿರುದಿಗೆ ತಕ್ಕಂತೆ 'ಕೆಡಿ'ಯನ್ನು ಅಚ್ಚು ಕಟ್ಟಾಗಿ ಕಟ್ಟಿ ಕೊಟ್ಟಿದ್ದಾರೆ. ಪ್ರತಿಯೊಂದು ಪಾತ್ರಗಳಿಗೂ ತೂಕವಿದೆ. ಕ್ಷಣ ಕ್ಷಣಕ್ಕೂ ಹೊಸ ಹೊಸ ಪಾತ್ರಗಳು ಕಥೆಯಲ್ಲಿ ಬರತಾನೇ ಇರುತ್ತವೇ. ಒಟ್ಟಿನಲ್ಲಿ ನಿರ್ದೇಶಕರು ಈ ಸಿನಿಮಾಗೆ ನೀಡಿದ ಮೂರು ವರ್ಷದ ಶ್ರಮ ವೆಸ್ಟ್‌ ಆಗಿಲ್ಲ ಎನ್ನಬಹುದು. ಇನ್ನು ಸಿನಿಮಾ ಶಕ್ತಿಯಾಗಿ ನಿಂತಿರುವುದು ನಿರ್ಮಾಣ ಸಂಸ್ಥೆ ಕೆ.ವಿ.ಎನ್, ಸಂಗೀತ ನಿರ್ದೇಶಕರು ಮತ್ತು ಛಾಯಾಗ್ರಾಹಕರು.  

ಇನ್ನು ಕಲಾವಿದರ ವಿಚಾರಕ್ಕೆ ಬಂದರೆ, ನಾಯಕನಾಗಿ ಧ್ರುವ ಸರ್ಜಾ ಅತ್ಯುತ್ತಮ ಅಭಿನಯ ಮಾಡಿದ್ದಾರೆ. ಇಷ್ಟು ವರ್ಷಗಳ ಕಾಲ ನೋಡಿದ ಧ್ರುವ ಬೇರೆ, ಕೆಡಿಯಲ್ಲಿ ನೋಡುವ ಧ್ರುವ ಬೇರೆಯಾಗಿ ಕಾಣುತ್ತಾರೆ. ಅದರಲ್ಲೂ ತನ್ನ ಫ್ಯಾಮಿಲಿಯನ್ನು ಕಾಪಾಡಲು ಹೋರಾಡುವ ಒಂದಿಷ್ಟು ದೃಶ್ಯಗಳಲ್ಲಂತೂ ಧ್ರುವ ಅಭಿನಯದಲ್ಲಿ ಉತ್ತಮರು ಎನಿಸುತ್ತಾರೆ. ನಾಯಕಿಯಾದ ರಿಷ್ಮಾ ಕೂಡ ಬಜಾರಿ ಪಾತ್ರದಲ್ಲಿ ಉತ್ತಮ ಅಭಿನಯ ಮಾಡಿದ್ದು, ಡ್ಯಾನ್ಸ್‌ನಲ್ಲಿ ಸಕ್ಕತ್ ಎನರ್ಜಿಯಾಗಿ ಸ್ಟೆಪ್ ಹಾಕಿದ್ದಾರೆ. ಉಳಿದಂತೆ ದೇವ್, ಸತ್ಯವತಿ (ಶಿಲ್ಪಾ ಶೆಟ್ಟಿ) ಹಾಗೂ ಧರ್ಮ ಪಾತ್ರಗಳು ಕೊಣೆಯವರೇಗೂ ನೆನಪಿನಲ್ಲಿ ಉಳಿಯುತ್ತವೆ. ಚಿತ್ರದ ಕೊಣೆಯಲ್ಲಿ ಬರುವ ಕಾಲಭೈರವ (ಕಿಚ್ಚ ಸುದೀಪ್) ಎರಡನೇ ಭಾಗಕ್ಕೆ ಲಿಡ್ ಕೊಡುವ ದೃಷ್ಠಿಯಿಂದ ಬಂದಂತೆ ಕಾಣುತ್ತದೆ. ಒಟ್ಟಿನಲ್ಲಿ ಕೆಡಿಯ ರಕ್ತ ಸಿಕ್ತ ಕಥೆಯಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಇದ್ದು, ಇದು ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದೆ.  

ರೇಟಿಂಗ್‌: 4/5 

ಚಿತ್ರ: ಕೆಡಿ 

ನಿರ್ದೇಶನ: ಜೋಗಿ ಪ್ರೇಮ್ 

ನಿರ್ಮಾಣ: ಕೆ.ವಿ.ಎನ್‌. ಪ್ರೊಡಕ್ಷನ್ಸ್‌ 

ಸಂಗೀತ: ಅರ್ಜುನ್ ಜನ್ಯ 

ಛಾಯಾಗ್ರಹಣ: ವಿಲಿಯಂ ಡೇವಿಡ್ 

ತಾರಾಗಣ: ಧ್ರುವ ಸರ್ಜಾ, ರಿಷ್ಮಾ ನಾನಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ವಿ. ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದವರು.