ಅನಾಥಾಶ್ರಮ, ವೃದ್ಧಾಶ್ರಮ ಮತ್ತು ಪ್ರತಿಷ್ಠಾನಕ್ಕೆ ದೇಣಿಗೆ ನೀಡಿದ ಕೆಎಲ್‌ಇ ವಿದ್ಯಾರ್ಥಿಗಳು

ಅನಾಥಾಶ್ರಮ, ವೃದ್ಧಾಶ್ರಮ ಮತ್ತು ಪ್ರತಿಷ್ಠಾನಕ್ಕೆ ದೇಣಿಗೆ ನೀಡಿದ ಕೆಎಲ್‌ಇ ವಿದ್ಯಾರ್ಥಿಗಳು KLE students donate to orphanage, old age home and foundation

ಲೋಕದರ್ಶನ ವರದಿ 

ಮಹಾಲಿಂಗಪುರ 01: ಇಲ್ಲಿನ ಕೆಎಲ್‌ಇ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಕೊನೆಯ ವರ್ಷದ ಚಟುವಟಿಕೆಯಾಗಿ ಮೋಜಿಗಾಗಿ ಪ್ರಾಧ್ಯಾಪಕರಿಂದ ಮತ್ತು ಸಹಪಾಠಿಗಳಿಂದ ದೇಣಿಗೆ ಸಂಗ್ರಹಿಸುವ ಟಾಸ್ಕ್‌ ಏರಿ​‍್ಡಸಿದ್ದರು. ಹಾಗೆ ಸಂಗ್ರಹವಾದ 7000 ರೂ.ಗಳನ್ನು ಪ್ರಾಧ್ಯಾಪಕರ ಸಲಹೆಯಂತೆ ಅನಾಥಾಶ್ರಮ, ವೃದ್ದಾಶ್ರಮ ಮತ್ತು ಪ್ರತಿಷ್ಠಾನಕ್ಕೆ ದೇಣಿಗೆ ನೀಡಿ ಕಳಕಳಿ ಮೆರೆದರು.   

ಜಮಖಂಡಿಯ ಜೈನ ಅನಾಥಾಶ್ರಮ ಮತ್ತು ವೃದ್ದಾಶ್ರಮಕ್ಕೆ ಕರೆ ಮಾಡಿ ಅಗತ್ಯ ಸಾಮಗ್ರಿಗಳ ಪಟ್ಟಿ ಮಾಡಿ, ಸಾವಯವ ಬೆಲ್ಲ, ಸಕ್ಕರೆ, ಚಹಾಪುಡಿ, ಸಾಬೂನು, ಎಣ್ಣೆ, ಬೇಳೆ, ಶೇಂಗಾ, ಚುರುಮುರಿ, ಐಸ್ಕ್ರೀಮ್, ಬಿಸ್ಕಿಟ್, ಟವಲ್ ಸೇರಿದಂತೆ ನಾನಾ ಪದಾರ್ಥಗಳ ಜೊತೆ, ಕ್ರೀಡಾ ಸಾಮಗ್ರಿ, ಕಲಿಕಾ ಸಾಮಗ್ರಿಗಳನ್ನೂ ಖರೀದಿಸಿ ಅನಾಥಾಶ್ರಮಕ್ಕೆ ತೆರಳಿ ಅನಾಥ ಮಕ್ಕಳೊಂದಿಗೆ ಆಟವಾಡಿ, ರಂಜಿಸಿ, ಅವರಿಗೆ ಸ್ಪರ್ಧೆ ಏರಿ​‍್ಡಸಿ ವಿಜೇತರಿಗೆ ಬಹುಮಾನ ವಿತರಿಸಿ ಖುಷಿಗೊಳಿಸಿ ಆನಂದ ಭಾಷ್ಪ ಸುರಿಸಿದರು. ವೃದ್ದರೊಂದಿಗೆ ಬೆರೆತು ಅವರ ಅನುಭವ ಕೇಳಿ ಕಣ್ಣೀರಾದರು. ಜೈನ ಅನಾಥಾಶ್ರಮದ ರೂವಾರಿ ಮುತ್ತಣ್ಣ ಅರಗಿ ವಿದ್ಯಾರ್ಥಿಗಳ ಕಳಕಳಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. 

ನಂತರ ಕಲ್ಲಹಳ್ಳಿಯ ಸತ್ಯಕಾಮ ಪ್ರತಿಷ್ಠಾನಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿದ್ದ ಸಂಸ್ಕಾರ ಶಿಬಿರದ ರೂವಾರಿ ವೀಣಾ ಬನ್ನಂಜೆ ಅವರಿಗೆ ಭೇಟಿ ನೀಡಿ ಅವರ ಸೇವೆಗೆ ಮನಸೋತು ಪ್ರತಿಷ್ಠಾನಕ್ಕೆ 2000 ರೂ. ಸಹಾಯಧನ ನೀಡಿದರು.  ಪ್ರಾಚಾರ್ಯ ಎನ್‌.ಬಿ.ಪಾಟೀಲ, ಇಂಗ್ಲೀಷ್ ವಿಭಾಗದ ಚಿದಾನಂದ ಐಗಳಿ, ಸಮಾಜಶಾಸ್ತ್ರ ವಿಭಾಗದ ಶಿವಲಿಂಗ ಸಿದ್ನಾಳ ಮಾರ್ಗದರ್ಶನದಲ್ಲಿ ಇಂಗ್ಲೀಷ್ ವಿಭಾಗದ ವಿದ್ಯಾರ್ಥಿಗಳಾದ ಬಸವರಾಜ ಮಾಳಿ, ಕಾವ್ಯಾ ಚಿಕ್ಕನ್ನವರ, ಪೂಜಾ ಹವಾಲ್ದಾರ, ಮಂಜು ಲಾಲಿಬುಡ್ಡಿ, ಸಚಿನ ಮಹಾಲಿಂಗಪುರ, ಸುಪ್ರಿಯಾ ಕಂಬಾರ, ಸಚಿನ ಕುದರಿಮನಿ ರೀಲ್ಸ್‌ ಮಾಡುತ್ತಲೇ ರಿಯಲ್ ಸೇವೆ ಮಾಡಿ ಗಮನ ಸೆಳೆದರು.   

ಮಾರ್ಗದರ್ಶಕ ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ, ಯಾರಿಗೆ ಯಾರೂ ಇಲ್ಲವೋ ಅವರಿಗೆ ದೇವರಿದ್ದಾನೆ. ಯಾರಿಗೆ ದೇವರು ಕೂಡ ಇಲ್ಲವೋ ಅವರಿಗೆ ನಾವಿದ್ದೇವೆ ಎಂಬುದನ್ನು ನಮ್ಮ ವಿದ್ಯಾರ್ಥಿಗಳು ತೋರಿಸಿ ಕೊಟ್ಟಿದ್ದಾರೆ. ಇಂದಿನ ಹೈಬ್ರೀಡ್ ಯುವಜನತೆಯಲ್ಲಿ ಇಂಥ ಪ್ರೀತಿ, ವಾತ್ಸಲ್ಯ, ಅನುಕಂಪ, ಅನುಭೂತಿಗಳಂಥ ಆದರ್ಶಗಳು ಮೂಡಬೇಕಾಗಿದೆ ಎಂದರು.  

ಒಟ್ಟಾರೆ ವಿದ್ಯಾರ್ಥಿಗಳು ಸಮಾಜದಿಂದ ಪಡೆಯುವುದರಿಂದ ಸಿಗುವ ಖುಷಿಗಿಂತ ಸಮಾಜಕ್ಕೆ ಕೊಡುವುದರಿಂದ ಸಿಗುವ ಖುಷಿಯೇ ಹೆಚ್ಚು ಎಂಬುದನ್ನು ಮನಗಂಡಿದ್ದಾರೆ. ಕಾಲೇಜಿನಲ್ಲಿ ಕಲಿಯುವ ವ್ಯಾಕರಣದ ಜೊತೆ ಸಮಾಜದಲ್ಲಿ ಕಲಿಯುವ ಅಂತಃಕರಣವೂ ನಿಜವಾದ ಕಲಿಕೆ ಎಂಬುದು ಸಾಬೀತಾಗಿದೆ.  

- ಎನ್‌.ಬಿ.ಪಾಟೀಲ

ಪ್ರಾಚಾರ್ಯ ಕೆ.ಎಲ್‌.ಇ ಪದವಿ ಕಾಲೇಜು ಮಹಾಲಿಂಗಪುರ