ಉಭಯ ಶ್ರೀಗಳ ಜಾತ್ರಾ ಮಹೋತ್ಸವ: ವೀರೇಶ್ವರ ಪುಣ್ಯಾಶ್ರಮದ ಪಾವಿತ್ರ್ಯ ಕಾಪಾಡಲು ಕರೆ

ಉಭಯ ಶ್ರೀಗಳ ಜಾತ್ರಾ ಮಹೋತ್ಸವ: ವೀರೇಶ್ವರ ಪುಣ್ಯಾಶ್ರಮದ ಪಾವಿತ್ರ್ಯ ಕಾಪಾಡಲು ಕರೆ  Jatra Mahotsava of the Two Seers: Call to Preserve the Sanctity of Veereshwara Punyashrama

ಲೋಕದರ್ಶನ ವರದಿ 

ಗದಗ 3: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಉಭಯ ಶ್ರೀಗಳ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕೀರ್ತನ ಸಮ್ಮೇಳನ ಹಾಗೂ ಧಾರ್ಮಿಕ ಸಭೆಯಲ್ಲಿ ಶಿರಹಟ್ಟಿಯ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ಮಾತನಾಡಿ, ವೀರೇಶ್ವರ ಪುಣ್ಯಾಶ್ರಮದ ಪಾವಿತ್ರ್ಯ, ಪರಂಪರೆ ಹಾಗೂ ಮೌಲ್ಯಗಳನ್ನು ಯಾವುದೇ ಕಾರಣಕ್ಕೂ ಹಾಳು ಮಾಡಬಾರದು ಎಂದು ಕರೆ ನೀಡಿದರು.  

ಆಶ್ರಮವು ಎಲ್ಲರಿಗೂ ತಾಯಿಯಂತಿದ್ದು, ಅದರ ಗೌರವ ಮತ್ತು ಸಂಪ್ರದಾಯವನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ಆಶ್ರಮದ ವಿಚಾರದಲ್ಲಿ ಸಂಯಮ, ತಾಳ್ಮೆ ಮತ್ತು ಏಕತೆಯನ್ನು ಕಾಪಾಡಿಕೊಳ್ಳುವಂತೆ ಭಕ್ತರಿಗೆ ಮನವಿ ಮಾಡಿದ ಅವರು, ಯಾವುದೇ ಪ್ರಚೋದನೆಗೆ ಒಳಗಾಗದೆ ಶಾಂತವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.  

ಆಶ್ರಮವು ಸಂಗೀತ, ಸಾಹಿತ್ಯ, ಕಲೆ ಹಾಗೂ ಆಧ್ಯಾತ್ಮಿಕ ಸಂಸ್ಕೃತಿಯ ಕೇಂದ್ರವಾಗಿದ್ದು, ಇಲ್ಲಿ ಜಾತಿ, ರಾಜಕೀಯ ಅಥವಾ ಪಕ್ಷಪಾತಕ್ಕೆ ಅವಕಾಶ ಇರಬಾರದು ಎಂದು ಸ್ಪಷ್ಟಪಡಿಸಿದರು. ಆಶ್ರಮಕ್ಕೆ ಬರುವವರು ಜಾತಿ ಹಾಗೂ ರಾಜಕೀಯ ಭಾವನೆಗಳನ್ನು ಹೊರಗಿಟ್ಟು ಭಕ್ತಿಭಾವದಿಂದ ಪ್ರವೇಶಿಸಬೇಕು ಎಂದು ತಿಳಿಸಿದರು.  

ಹಿಂದಿನ ಪೀಠಾಧಿಪತಿಗಳಾದ ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು ತಪಸ್ಸು, ಸಂಗೀತ, ಸಾಹಿತ್ಯ ಹಾಗೂ ಸೇವೆಯ ಮೂಲಕ ಆಶ್ರಮದ ಗೌರವವನ್ನು ಎತ್ತಿಹಿಡಿದಿದ್ದರು. ಅವರ ಆದರ್ಶಗಳನ್ನು ಮುಂದುವರಿಸಿಕೊಂಡು ಆಶ್ರಮದ ಮೂಲ ಪರಂಪರೆಯನ್ನು ಉಳಿಸಬೇಕು ಎಂದು ಅವರು ಹೇಳಿದರು.