ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಪತ್ರಕರ್ತರ ಕರ್ತವ್ಯ

ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಪತ್ರಕರ್ತರ ಕರ್ತವ್ಯ It is the duty of journalists to create awareness among the people about the projects

ಲೋಕದರ್ಶನ ವರದಿ 

ವಿಜಯಪುರ 11: ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಪತ್ರಕರ್ತರ ಪ್ರಮುಖ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಮಕ್ಕಳ ಹಾಗೂ ಸಮಾಜದ ಹಿತದೃಷ್ಟಿಯಿಂದ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಅಧ್ಯಕ್ಷ ಅಶೋಕ್ ಅಯ್ಯಳ್ಳಿ ಹೇಳಿದರು.  

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಯುನಿಸೆಫ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಮಕ್ಕಳ ವಿಷಯಗಳ ಕುರಿತು ಕರ್ನಾಟಕ ರಾಜ್ಯದ ಪತ್ರಕರ್ತರಿಗೆ ಪರಿಚಯ” ವಿಷಯದಡಿ ನಡೆದ ಕಾರ್ಯಾಗಾರದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಪತ್ರಕರ್ತರು ಸಾಕಷ್ಟು ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಾರೆ. ಯುನಿಸೆಫ್ ಮಕ್ಕಳಿಗಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ಸುರಕ್ಷತೆ ಕುರಿತಂತೆ ಜಾಗೃತಿ ಮೂಡಿಸುತ್ತಿದೆ. ಒಬ್ಬ ಪತ್ರಕರ್ತನಿಗೆ ನೀಡುವ ತರಬೇತಿ ಲಕ್ಷಾಂತರ ಜನರಿಗೆ ಮಾಹಿತಿ ತಲುಪಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದರು.  

“ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದು. ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿ ಕ್ಷಣಾರ್ಧದಲ್ಲಿ ಜನರಿಗೆ ತಲುಪುತ್ತದೆ. ಆದ್ದರಿಂದ ತಪ್ಪು ಮಾಹಿತಿಗೆ ಅವಕಾಶ ನೀಡದೆ, ಪರೀಶೀಲಿತ ಹಾಗೂ ನಿಖರ ಮಾಹಿತಿಯನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ” ಎಂದು ಅವರು ಅಭಿಪ್ರಾಯಪಟ್ಟರು.  

ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪತ್ರಕರ್ತರು ತಮ್ಮ ಅನುಭವಗಳನ್ನು ಹಂಚಿಕೊಂಡರು.  ಕಾರ್ಯಕ್ರಮದಲ್ಲಿ ಯುನಿಸೆಫ್ ಪ್ರತಿನಿಧಿ ಪ್ರಶೂನ್ ಸೇನ್, ಮೈಸೂರು ವಿಶ್ವವಿದ್ಯಾಲಯದ ಸ್ವಪ್ನ ಎಂ.ಎಸ್‌., ಡಾ. ರಾಕೇಶ್, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.