ಮನುಷ್ಯ ಜನ್ಮ ಸಾರ್ಥಕಪಡಿಸಿ ಕೊಳ್ಳುವುದು ಕರ್ತವ್ಯ: ಮುಕ್ತಾ ತಾಯಿ

ಮನುಷ್ಯ ಜನ್ಮ ಸಾರ್ಥಕಪಡಿಸಿ ಕೊಳ್ಳುವುದು ಕರ್ತವ್ಯ: ಮುಕ್ತಾ ತಾಯಿ  It is one's duty to make human life meaningful: Mukta Tayi


ಗುರ್ಲಾಪುರ 16: ಸಮೀಪದ ಶಿವಪುರ (ಹ) ಗ್ರಾಮದಲ್ಲಿ ಅಗಸಿ ಕಾ ಮಹಾರಾಜ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಮಾತೋಶ್ರೀ ಮುಕ್ತಾ ತಾಯಿಯವರು, ಮನುಷ್ಯ ಜನ್ಮ ಅತ್ಯಂತ ಅಮೂಲ್ಯವಾಗಿದ್ದು, ಅದನ್ನು ಸತ್ಕಾರ್ಯ, ಧರ್ಮ, ಸೇವೆ, ಭಕ್ತಿ ಹಾಗೂ ಆತ್ಮವಿಚಾರಕ್ಕೆ ಬಳಸಿಕೊಳ್ಳಬೇಕು ಎಂದು ಹೇಳಿದರು. ಗಣೇಶ ಚತುರ್ಥಿಯಂತಹ ಪವಿತ್ರ ಸಂದರ್ಭದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಹಾಗೂ ಪ್ರಸಾದ ನೆರವೇರಿಸುವುದರ ಜೊತೆಗೆ ಮಹಾತ್ಮರ ವಚನಗಳನ್ನು ಆಲಿಸಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮನುಷ್ಯ ಜನ್ಮ ದೊರೆಯುವುದು ಅಪರೂಪವಾಗಿದ್ದು, ಕೇವಲ ಲೌಕಿಕ ಸುಖಕ್ಕೆ ಸೀಮಿತವಾಗದೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಾಧನೆಗೆ ಬಳಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ಮನುಷ್ಯ ಶರೀರ ಶಾಶ್ವತವಲ್ಲ. ಪಂಚಮಹಾಭೂತಗಳಿಂದ ನಿರ್ಮಾಣವಾಗಿರುವ ದೇಹವು ಹುಟ್ಟಿ, ಬೆಳೆದು, ವೃದ್ಧಾಪ್ಯಕ್ಕೆ ತಲುಪಿ ನಾಶವಾಗುತ್ತದೆ. ಆದರೆ ದೇಹದೊಳಗಿನ ಆತ್ಮತತ್ವ ನಾಶವಾಗುವುದಿಲ್ಲ. ಆದ್ದರಿಂದ ‘ನಾನು ಯಾರು ಈ ಜನ್ಮದ ಉದ್ದೇಶವೇನು ನನ್ನ ಕರ್ತವ್ಯವೇನು ಎಂಬ ಪ್ರಶ್ನೆಗಳನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಜೀವನದ ಅವಧಿ ಯಾರಿಗೂ ತಿಳಿದಿಲ್ಲ. ಹೀಗಾಗಿ ಇರುವಷ್ಟು ದಿನಗಳಲ್ಲಿ ಸತ್ಕಾರ್ಯ, ಧರ್ಮ, ಸೇವೆ ಹಾಗೂ ಭಕ್ತಿಯ ಮಾರ್ಗದಲ್ಲಿ ನಡೆಯಬೇಕು. ಶಂಕರಾಚಾರ್ಯರಂತಹ ಮಹಾತ್ಮರು ಆತ್ಮಜ್ಞಾನದ ಮಾರ್ಗವನ್ನು ತೋರಿಸಿದ್ದು, ದೇಹವೇ ನಾನು ಎಂಬ ಭ್ರಮೆ ತೊರೆದು ಆತ್ಮಸ್ವರೂಪ ಅರಿಯುವುದು ಜೀವನದ ಪರಮ ಗುರಿಯಾಗಿದೆ ಎಂದು ಮುಕ್ತಾ ತಾಯಿಯವರು ಹೇಳಿದರು. ಕಾರ್ಯಕ್ರಮದಲ್ಲಿ ಭಕ್ತಾದಿಗಳಿಂದ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಗಣೇಶೋತ್ಸವ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.