ಘಾಡ್ಗೆ ಶೌರ್ಯಗಾಥೆ ಮೂಲಕ ವಿದ್ಯಾರ್ಥಿಗಳ ಸಂವಾದ

ಘಾಡ್ಗೆ ಶೌರ್ಯಗಾಥೆ ಮೂಲಕ ವಿದ್ಯಾರ್ಥಿಗಳ ಸಂವಾದ  Interaction with students through the saga of Ghadge's valour


ಬೆಳಗಾವಿ 21: ದ್ವಿತೀಯ ಮಹಾಯುದ್ಧದಲ್ಲಿ ಅಸಾಧಾರಣ ಶೌರ್ಯ ಮೆರೆದ ನಾಯಕ್ ಯಶವಂತ ಘಾಡ್ಗೆ, ವಿಸಿ ಅವರ ಸಾಹಸ ಮತ್ತು ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಬೆಳಗಾವಿಯ ಆರ್ಮಿ ಪಬ್ಲಿಕ್ ಸ್ಕೂಲ್ ಹಾಗೂ ಇಟಲಿಯ ಮೊಂಟೋನ್ನ ಗಿಯುಸೆಪ್ಪೆ ಪೊಲಿಡೋರಿ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿಗಳ ನಡುವೆ ವಿದ್ಯಾರ್ಥಿ ಸಂವಾದ ನಡೆಯಿತು.  

ಇಟಲಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಎರಡೂ ದೇಶಗಳ ವಿದ್ಯಾರ್ಥಿಗಳು ನಾಯಕ್ ಯಶವಂತ ಘಾಡ್ಗೆ ಅವರ ಸಾಹಸಗಾಥೆಯನ್ನು ಹಂಚಿಕೊಂಡರು. ಕೇವಲ 22ನೇ ವಯಸ್ಸಿನಲ್ಲಿ ಇಟಲಿಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅವರಿಗೆ ಮರಣೋತ್ತರವಾಗಿ ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ದೊರೆತಿತ್ತು.  

ಕಾರ್ಯಕ್ರಮದಲ್ಲಿ ಬೆಳಗಾವಿಯ ಆರ್ಮಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ತಮ್ಮ ಶಾಲೆ ಹಾಗೂ ಮರಾಠಾ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್ನೊಂದಿಗಿನ ನಂಟನ್ನು ಪರಿಚಯಿಸಿದರು. ಘಾಡ್ಗೆ ಅವರ ಶೌರ್ಯಗಾಥೆಯನ್ನು ನಿರೂಪಿಸುವುದರ ಜತೆಗೆ ಮೈಮ್ ಪ್ರದರ್ಶನದ ಮೂಲಕ ಅವರ ಸಾಹಸವನ್ನು ಪರಿಚಯಿಸಲಾಯಿತು. ರೆಜಿಮೆಂಟಲ್ ಮ್ಯೂಸಿಯಂನ ಪರಿಚಯವನ್ನೂ ಇಟಲಿ ವಿದ್ಯಾರ್ಥಿಗಳಿಗೆ ಮಾಡಿಕೊಡಲಾಯಿತು.

ನಂತರ ಎರಡೂ ದೇಶಗಳ ವಿದ್ಯಾರ್ಥಿಗಳ ನಡುವೆ ನಡೆದ ಸಂವಾದದಲ್ಲಿ ಸಾಂಸ್ಕೃತಿಕ ಅರಿವು, ಪರಸ್ಪರ ಗೌರವ ಹಾಗೂ ಸ್ನೇಹದ ಕುರಿತು ವಿಚಾರ ವಿನಿಮಯ ನಡೆಯಿತು. ಭಾರತ ಮತ್ತು ಇಟಲಿಯ ರಾಷ್ಟ್ರಗೀತೆಗಳ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ನಾಯಕ್ ಯಶವಂತ ಘಾಡ್ಗೆ ಅವರ ಶೌರ್ಯ ಮತ್ತು ತ್ಯಾಗವು ದೇಶಗಳ ಗಡಿಗಳನ್ನು ಮೀರಿ ಯುವಜನತೆಗೆ ಸ್ಫೂರ್ತಿಯಾಗಿದ್ದು, ನಡುವಿನ ಐತಿಹಾಸಿಕ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಸಂದೇಶವನ್ನು ಕಾರ್ಯಕ್ರಮ ಸಾರಿತು.