ಧಾರವಾಡ 16: ವಿಶ್ವದಲ್ಲಿ ಭಾರತ ಶಕ್ತಿಶಾಲಿಯಾಗಿ ಬೆಳೆದು ನಿಲ್ಲಲು, ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಲು ಈ ದೇಶದ ಕೃಷಿ ಸದೃಢವಾಗಿ ಬೆಳೆದರೆ ಮಾತ್ರ ಸಾಧ್ಯ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.
ಇಲ್ಲಿನ ಕೃಷಿ ವಿವಿ ಆವರಣದಲ್ಲಿ ಏರ್ಪಡಿಸಿದ್ದ ಕೃಷಿ ವಿದ್ಯಾಲಯದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಕಸಿತ ಭಾರತ ಗುರಿ ತಲುಪಲು ಕೃಷಿಗೆ ಒತ್ತು ನಿಡಿದರೆ ಮಾತ್ರ ಸಾಧ್ಯ. ಶೀತಲಗೃಹ ನಿರ್ಮಾಣ ಮತ್ತು ಮಾರುಕಟ್ಟೆ ಮೌಲ್ಯವರ್ಧನೆ, ರೈತನ ಮಕ್ಕಳಿಗೆ ಕೃಷಿ ವಸ್ತುಗಳನ್ನು ರಫ್ತು ಮಾಡುವ ತರಬೇತಿ ನೀಡಬೇಕು ಎಂದರು. ರೈತ ಜಿಡಿಪಿಗೆ ಕೊಡುಗೆ ನೀಡುತ್ತಾನೆ. ಕೃಷಿ ಆಧಾರಿತ ಕೈಗಾರಿಕೆಗಳಿಂದ ಬರುವ ಲಾಭವನ್ನು ಮರಳಿ ರೈತರಿಗೆ ನೀಡುವ ನಿಟ್ಟಿನಲ್ಲಿ ಸಾಗಬೇಕಾಗಿದೆ. ರೈತರನ್ನು ಸಂತೋಷವಾಗಿ ಇಡಬೇಕು ಅಂದಾಗ ದೇಶ ಗಟ್ಟಿಯಾಗಿ ನಿಲ್ಲಲಿದೆ ಎಂದರು.
ಇಂದು ಹವಾಮಾನ ವೈಪರೀತ್ಯ ಮತ್ತು ಇತರ ಸಮಸ್ಯೆಗಳನ್ನು ರೈತರು ಎದುರಿಸುವ ಅನಿವಾರ್ಯತೆ ಇದೆ. ಇಂದು ಇದೆಲ್ಲವನ್ನು ಸರ್ಕಾರ ತೊಡೆದು ಹಾಕುವ ಕೆಲಸವನ್ನು ಮಾಡುತ್ತಿದೆ ಎಂದರು.
ಧಾರವಾಡ ಕೃಷಿ ವಿವಿ ಕೃಷಿ ತರಬೇತಿ, ಕೃಷಿ ಮಾರುಕಟ್ಟೆಗಳ ಜೊತೆಗೆ ಸಂಪರ್ಕ ಹೊಂದಿದ್ದು ಹರ್ಷ ತಂದಿದೆ. ಈ ಕೃಷಿ ವಿವಿ ರೈತ ಸಮುದಾಯಕ್ಕೆ ನೀಡಿದ ಕೊಡುಗೆ ಮೆಚ್ಚುವಂತದ್ದು ಎಂದರು.
ವೇಗವಾಗಿ ಆರ್ಥಿಕವಾಗಿ ಬೆಳೆಯುತ್ತಿದೆ. ಮೂರನೇ ಆರ್ಥಿಕ ಶಕ್ತಿಯಾಗುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ. ಇದೀಗ ದೇಶದಲ್ಲಿ ರಸ್ತೆ, ರೈಲು, ವಿಮಾನ ಕ್ಷೇತ್ರದಲ್ಲಿ ಬೆಳವಣಿಗೆಯಾಗುತ್ತಿದೆ. ಇಂಟರ್ನೆಟ್ ಸಂಪರ್ಕ ಎಲ್ಲವನ್ನೂ ಮಾಡಿಸುತ್ತಿದೆ. ದಿಲ್ ಮಾಂಗೆ ಮೋರ್ ಎನ್ನುತ್ತಿದ್ದಾರೆ ಪ್ರಧಾನಿ ಮೋದಿ. ಇದೀಗ ಕೃಷಿ ಕ್ಷೇತ್ರದ ಬೆಳವಣಿಗೆಗೆ ಇಂತಹ ಸಂಸ್ಥೆಗಳ ಕೊಡುಗೆ ದೊಡ್ಡದು. ಲಾಲಾ ಬಹದ್ದೂರ್ ಶಾಸ್ತ್ರಿ ಜೈ ಕಿಸಾನ್ ಎಂದರು, ಅಟಲ್ ಜಿ ಜೈ ವಿಜ್ಞಾನ ಎಂದರು ಇದೀಗ ಪ್ರಧಾನಿ ಮೋದಿ ಜೈ ಅನುಸಂಧಾನ ಎಂದಿದ್ದು, ಅದಕ್ಕೆ ಇಂತಹ ಸಂಸ್ಥೆಗಳ ಕೊಡುಗೆ ದೊಡ್ಡದು ಎಂದು ಧನಕರ್ ಹೇಳಿದರು.
ಅರಿಷಿಣದಂತಹ ಔಷಧ ಗುಣವುಳ್ಳ ಕೃಷಿ ಉತ್ಪನ್ನವನ್ನು ಮೌಲ್ಯ ವರ್ಧನ ಮಾಡುವ ನಿಟ್ಟಿನಲ್ಲಿ ಕೃಷಿ ಮಹಾವಿದ್ಯಾಲಯ ಶ್ರಮಿಸಬೇಕು ಅಂದಾಗ ಅಮೃತಮಹೋತ್ಸ ಕಾರ್ಯಕ್ರಮಕ್ಕೆ ನೆರಗು ಬರಲಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಚಾಲನೆ ಸಲಹೆ ನೀಡಿದರು.ಹಳೆ ವಿದ್ಯಾರ್ಥಿಗಳು ತಾವು ಕಲಿತ ವಿದ್ಯಾಲಯಕ್ಕೆ ಕೊಡುಗೆ ನೀಡಬೇಕು. ಇಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ ಎಂದು ಉಪರಾಷ್ಟ್ರಪತಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕೃಷಿ ವಿವಿ ಸಾಮಾನ್ಯ ಜನರ ಮತ್ತು ಕೃಷಿಕರ ವಿವಿ ಯಾಗಿದೆ. ಲ್ಯಾಬ್ ನಿಂದ ಲ್ಯಾಂಡ್ ಗೆ ಎನ್ನುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾತಿನಂತೆ ಕೆಲಸ ಮಾಡುತ್ತಿದೆ ಎಂದರು.
ಕೃಷಿ ವಿವಿ ಡಾ. ಎಸ್.ಡಬ್ಲು. ಮೆಣಸಿನಕಾಯಿ ಸೇರಿ ಅನೇಕರು ಕೊಡುಗೆ ನೀಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಹವಾಮಾನ ಕೇಂದ್ರ ಬಂದಿದ್ದು ಕೆಲವೆ ದಿನದಲ್ಲಿ 175 ಕಿ.ಮಿ.ವ್ಯಾಪ್ತಿಯಲ್ಲಿನ ಹವಾಮಾನ ರೈತರಿಗೆ ತಿಳಿಸಲು ಯೋಜಿಸಲಾಗಿದೆ. ಮೋದಿ ಅವರ ನೇತೃತ್ವದಲ್ಲಿ ಕೃಷಿ ಅಭಿವೃದ್ಧಿ ಗೆ ಕ್ರಮ ವಹಿಸಿದ್ದಾರೆ. ವಿಶ್ವದಲ್ಲಿ ಕಡಿಮೆ ಬೆಲೆಯಲ್ಲಿ ರಾಸಾಯನಿಕ ಗೊಬ್ಬರ ಮಾಡುತ್ತಿದ್ದೇವೆ. 2014 ರಲ್ಲಿ 18 ಸಾವಿರ ಕೋಟಿ ರೂ. ಇದ್ದ ಕೃಷಿ ಬಜೆಟನ್ನು 1.27 ಲಕ್ಷ ಕೋಟಿ ರೂ. ಕೃಷಿ ಬಜೆಟ್ ನೀಡಿದ್ದೆವೆ. ಬೆಂಬೆಲೆ ನೀಡುತ್ತಿದ್ದು, ಅದನ್ನು ಹೆಚ್ಚಿಸುತ್ತಿದ್ದೇವೆ.ಸಕ್ಕರೆ ಹೆಚ್ಚಾಗಿದ್ದು ಅದನ್ನು ರಫ್ತು ಮಾಡಲು ಯೋಜಿಸಲಾಗಿದೆ. ಖಾದ್ಯತೈಲ ಮೆಷಿನ್, ತೋಟಗಾರಿಕರ ಮಿಷನ್ ಮಾಡಿದ್ದೇವೆ ಎಂದರು.
ರಾಜ್ಯಪಾಲ ತಾವರಚಂದ ಗೆಹ್ಲೊಟ್ ಮಾತನಾಡಿ, ಕೃಷಿಯ ತಂತ್ರಜ್ಞಾನ ಬಹು ಬೇಗ ಬೆಳವಣಿಗೆ ಆಗುತ್ತಿದೆ. ಈ ನಿಟ್ಟಿನಲ್ಲಿ ಕೃಷಿ ವಿವಿ ರೈತರಿಗೆ ಅನುಕೂಲ ಕೆಲಸ ಮಾಡುತ್ತಿರುವುದು ಹರ್ಷ ತಂದಿದೆ. ದೇಶಕ್ಕೆ ಉತ್ತಮ ಕೊಡುಗೆ ನೀಡಿದ್ದು ಈ ದೇಶದ ಕೃಷಿ. ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಲಾಭದಾಯಕ ಮಾಡಲು ಮತ್ತು ರೈತರಿಗೆ ಅನುಕೂಲ ಮಾಡಿಕೊಡಬೇಕು. ಪರಿಸರದ ರಕ್ಷಣೆ ಮಾಡಿಕೊಂಡು ಕೃಷಿ ತಜ್ಞರು, ವಿದ್ಯಾರ್ಥಿಗಳು ಕೃಷಿ ಕ್ಷೇತ್ರದ ಶಕ್ತಿ ಶಾಲಿ ಮಾಡಬೇಕಿದೆ ಎಂದರು.
ಉಪರಾಷ್ಟ್ರಪತಿ ಅವರ ಪತ್ನಿ ಸುದೇಶ ದನಕರ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉಪಸ್ಥಿತರಿದ್ದರು. ಕುಲಪತಿ ಡಾ.ಪಿ.ಎಲ್ ಪಾಟೀಲ್ ಗಣ್ಯರನ್ನು ಸ್ವಾಗತಿಸಿದರು. ಹಳೆ ವಿದ್ಯಾರ್ಥಿಗಳು, ಕೃಷಿ ವಿಶ್ವವಿದ್ಯಾಲಯ ಸಿಬ್ಬಂದಿ ಹಾಜರಿದ್ದರು.