ಕಾರವಾರ ಬಂದರಿನಲ್ಲಿ ನಡೆದ ಘಟನೆ:ವಾಣಿಜ್ಯ ಹಡಗಿನಿಂದ ಡಾಂಬರು ಸೋರಿಕೆ

ಕಾರವಾರ ಬಂದರಿನಲ್ಲಿ ನಡೆದ ಘಟನೆ:ವಾಣಿಜ್ಯ ಹಡಗಿನಿಂದ ಡಾಂಬರು ಸೋರಿಕೆ Incident at Karwar Port: Bitumen Leak from Commercial Ship

ಕಾರವಾರ 12: ಬಂದರಿನಲ್ಲಿ  ಬಂದರಿನಲ್ಲಿ  ಡಾಂಬರ್ ಸೋರಿಕೆಯಾಗಿರುವ ಘಟನೆ ರವಿವಾರ ನಡೆದಿದೆ.  ಬಂದರಿನೊಳಗೆ  ವಾಣಿಜ್ಯ ಹಡಗಿನಿಂದ ಸಾಕಷ್ಟು ಪ್ರಮಾಣದಲ್ಲಿ ಡಾಂಬರ್ ಚೆಲ್ಲಿಕೊಂಡಿದ್ದು, ಸ್ವಲ್ಪ ಪ್ರಮಾಣದ ಡಾಂಬರು  ಸಮುದ್ರಕ್ಕೂ ಸೇರಿರುವುದರಿಂದ ಮಾಲಿನ್ಯದ ಸಾಧ್ಯತೆ ಇದೆ. ಬಂದರು ಪ್ರದೇಶದ ಅಲಿಗದ್ದಾದ ಕಂಪನಿಗೆ ಸೇರಿದ ಎಂ.ಟಿ. ಪದ್ಮನಾಭ್ ಹಡಗಿನಿಂದ ಡಾಂಬ ಸೋರಿಕೆಯಾಗಿದೆ ಎನ್ನಲಾಗಿದೆ. ಒಮಾನ್ ದೇಶದ  ಶಿನಾಸ್ ಬಂದರಿನಿಂದ 4,460.551 ಮೆಟ್ರಿಕ್ ಟನ್ ಬಿಟುಮೆನ್ ಹೊತ್ತು ಬಂದಿದ್ದ ವಾಣಿಜ್ಯ ಶಿಪ್  ನಿಂದ ಡಾಂಬರು ಅನ್ ಲೋಡ್ ಮಾಡುವಾಗ,  ತಾಂತ್ರಿಕ ದೋಷದಿಂದ ಈ ಸೋರಿಕೆ ಸಂಭವಿಸಿದೆ ಎನ್ನಲಾಗುತ್ತಿದೆ.

ಬಿಸಿಯಾದ ಡಾಂಬರ್ ಬಂದರಿನ ಪ್ರದೇಶದಲ್ಲಿ ಹರಡಿಕೊಂಡಿರುವುದರ ಜೊತೆಗೆ ಸಮುದ್ರದ ನೀರಿನಲ್ಲೂ ಬೆರೆತಿರುವ ಮಾಹಿತಿ ಲಭ್ಯವಾಗಿದೆ. ಡಾಂಬರ್ ಸಮುದ್ರಕ್ಕೆ ಸೇರುವುದರಿಂದ ಮೀನು ಹಾಗೂ ಇತರ ಜಲಚರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ಸಮುದ್ರದ ಮೇಲ್ಮೈಯಲ್ಲಿ ಡಾಂಬರ್ ಪದರ ರೂಪುಗೊಂಡರೆ ಸಣ್ಣ ದೋಣಿಗಳ ಸಂಚಾರಕ್ಕೂ ಅಡಚಣೆ ಎನ್ನಲಾಗುತ್ತಿದೆ. ವಾಣಿಜ್ಯ ಹಡಗಿನಿಂದ  ಸೋರಿಕೆಯಾದ ಡಾಂಬರ್ ತೆರವುಗೊಳಿಸಲು ಸಂಬಂಧಪಟ್ಟ ಏಜೆನ್ಸಿಗಳು ಸಮುದ್ರದಲ್ಲಿ ಸ್ವಚ್ಛತಾ ಕಾರ್ಯಾಚರಣೆ ಆರಂಭಿಸಿವೆ.  ಘಟನೆಗೆ ನಿಖರ ಕಾರಣವೇನು, ಸುರಕ್ಷತಾ ನಿಯಮಗಳಲ್ಲಿ ಯಾವುದೇ ನಿರ್ಲಕ್ಷ್ಯ ನಡೆದಿದೆಯೇ, ಎಂಬ ಬಗ್ಗೆ  ಸಂಬಂಧಪಟ್ಟ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಿ  ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.