ಮಹಾಲೇಖಪಾಲರ ಸಲಹೆಗಳನ್ನು ಆದ್ಯತೆಯಡಿ ಅನುಷ್ಠಾನಗೊಳಿಸಿ: ದೀಪಾ ಚೋಳನ್

ಧಾರವಾಡ 27: 2014-15 ರಿಂದ 2018-19 ರ ಅವಧಿಯಲ್ಲಿ ರಸ್ತೆ ಸುರಕ್ಷತೆ ಕುರಿತು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಪಾಲುದಾರ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮಹಾಲೇಖಪಾಲರು ಲೆಕ್ಕಪರಿಶೋಧನೆ ನಡೆಸಿ ನೀಡಿರುವ ಸಲಹೆಗಳನ್ನು ಸಂಬಂಧಿಸಿದ ಇಲಾಖೆಗಳು ಆದ್ಯತೆಯಡಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಲೆಕ್ಕಪರಿಶೋಧನಾ ವಿಚಾರಣಾ  ಕಾರ್ಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಸ್ತೆ ಸುರಕ್ಷತಾ ಸಮಿತಿಯ ಪ್ರಮುಖ ಪಾಲುದಾರ ಇಲಾಖೆಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್, ಲೋಕೋಪಯೋಗಿ, ಸಾರಿಗೆ, ಕಂದಾಯ ಇಲಾಖೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗಗಳು ಕೈಗೊಳ್ಳಬೇಕಾದ ಕ್ರಮಗಳನ್ನು ನಿಯಮಾನುಸಾರ ತಕ್ಷಣ ಅನುಷ್ಠಾನಗೊಳಿಸಿ, ಮಹಾಲೇಖಪಾಲರ ಕಚೇರಿಯ ಹಿರಿಯ ಲೆಕ್ಕ ಪರಿಶೋಧನಾಧಿಕಾರಿಗಳಿಗೆ ತ್ವರಿತವಾಗಿ ಮಾಹಿತಿ ನೀಡಬೇಕೆಂದು ಸೂಚಿಸಿದರು.

ಹಿರಿಯ ಲೆಕ್ಕ ಪರಿಶೋಧನಾಧಿಕಾರಿ ಶಂಕರನಾರಾಯಣ ಮಾತನಾಡಿ, ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಬಳಿ ಟ್ರೌಮಾ ಕೇರ್ ಸೆಂಟರ್ (ಖಿಡಿಚಿಣಟಚಿ ಅಚಿಡಿಜ ಅಜಟಿಣಡಿಜ) ಲಭ್ಯತೆ ಕುರಿತ ಮಾಹಿತಿ ಪ್ರಯಾಣಿಕರಿಗೆ ಸಿಗಬೇಕು. ಪೊಲೀಸ್ ಇಲಾಖೆಯು ಗಸ್ತು ಕಾರ್ಯಕ್ಕಾಗಿ ಖರೀದಿಸಿರುವ ನಿಗದಿತ ವಾಹನಗಳಲ್ಲಿಯೇ ಗಸ್ತು ಕಾರ್ಯ ಕೈಗೊಂಡು ವಾಹನದ ಲಾಗ್ ಪುಸ್ತಕ ನಿರ್ವಹಿಸಿ, ಸಲ್ಲಿಸಬೇಕು. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಂಟಿಯಾಗಿ ಸಮೀಕ್ಷೆ ನಡೆಸಿ ಬ್ಲ್ಯಾಕ್ ಸ್ಪಾಟ್ ಗಳಲ್ಲಿ ಅಪಘಾತ ತಡೆಯ ಕ್ರಮ ಕೈಗೊಳ್ಳಬೇಕು. ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಕಡ್ಡಾಯವಾಗಿ ಕಾರ್ಯ ಪರಿಶೀಲನೆ ಮಾಡಬೇಕು ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಸಿ.ಡಿ.ನಾಯಕ್, ಅಪ್ಪಯ್ಯ ನಾಲತ್ವಾಡಮಠ, ಡಿವೈಎಸ್ ಪಿ ಗುರು ಮತ್ತೂರ, ಸಂಚಾರ ವಿಭಾಗದ ಎಸಿಪಿ ಎಸ್.ಎಂ.ಸಂದಿಗವಾಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಕೆ.ಮಾನಕರ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ವಿರೂಪಾಕ್ಷ ಯಮಕನಮರಡಿ, ಆರ್.ಕೆ.ಮಠದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜಗದೀಶ ಯಲಿಗಾರ, ವಾಕರಸಾಸಂ ಡಿಟಿಓ ಅಶೋಕ ಪಾಟೀಲ ಮತ್ತಿತರರು ಇದ್ದರು.