ನನ್ನ ರಕ್ಷಣೆಗಾಗಿ, ಮನಸ್ಸಿನ ನೆಮ್ಮದಿಗಾಗಿ ಹೋಮ ಮಾಡಿಸಿದ್ದೇನೆ: ಡಿ.ಕೆ ಶಿವಕುಮಾರ್

I performed homa for my protection, peace of mind: DK Shivakumar

ಬೆಂಗಳೂರು 10: ನನ್ನ ರಕ್ಷಣೆಗಾಗಿ, ಮನಸ್ಸಿನ ನೆಮ್ಮದಿಗಾಗಿ ಸಮಾಧಾನಕ್ಕಾಗಿ ಹೋಮ ಮಾಡಿಸಿದ್ದೇನೆ. ನಾನು ಪ್ರತಿದಿನವೂ ಪೂಜೆ, ಹೋಮ, ದೇವರ ದರ್ಶನ ಮಾಡುವ ವ್ಯಕ್ತಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ವೈಕುಂಠ ಏಕಾದಶಿಯ ಪ್ರಯುಕ್ತ ಮಲ್ಲೇಶ್ವರದ ವೆಂಕಟೇಶ್ವರ ದೇಗುಲದಲ್ಲಿ ದೇವರ ದರ್ಶನದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಗುರುವಾರ ತಮಿಳುನಾಡಿನ ದೇವಸ್ಥಾನಗಳಲ್ಲಿ ಹೋಮ ಮಾಡಿಸಿರುವ ಬಗ್ಗೆ ಕೇಳಿದಾಗ, ದೇವರ ಮೇಲೆ ನಂಬಿಕೆಯಿಟ್ಟಿರುವ ವ್ಯಕ್ತಿ ನಾನು. ನನಗೆ ಧರ್ಮ, ದೇವರು, ನಮ್ಮ ಆಚರಣೆಗಳ ಮೇಲೆ ನಂಬಿಕೆಯಿದೆ. ಇದರಲ್ಲಿ ಯಾವುದೇ ವಿಶೇಷವಿಲ್ಲ. ನಾನು ಪ್ರತಿದಿನ ದೇವರಿಗೆ ನಮಸ್ಕಾರ ಮಾಡದೇ ಮನೆಯಿಂದ ಹೊರಗೆ ಬರುವುದಿಲ್ಲ. ನಾನು ಯಾವ ಶಕ್ತಿಯನ್ನು ನಂಬುತ್ತೇನೆಯೊ ಅದರ ಮೇಲೆ ಭಕ್ತಿ, ಪ್ರೀತಿ ಇದ್ದೇ ಇರುತ್ತದೆ ಎಂದು ಹೇಳಿದರು.

ದೇವರನ್ನ ಅಧಿಕಾರ ಕೊಡಪ್ಪ, ಶತ್ರುಗಳ ನಾಶಕ್ಕೆ ಶಿವಕುಮಾರ್ ಹೋಮ ಮಾಡಿಸಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದರು.

ಅದಕ್ಕೆ ಪ್ರತ್ರಿಯಿಸಿದ ಡಿ.ಕೆ ಶಿವಕುಮಾರ್ ನಾನು ಪ್ರತಿ ದಿನವೂ ನನಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡುತ್ತಿರುತ್ತೇನೆ. ನನಗೆ ಯಾರ್ಯಾರು ತೊಂದರೆ ಕೊಡುತ್ತಾರೆಯೋ ಅವರಿಂದ ನನಗೆ ರಕ್ಷಣೆ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಿರುತ್ತೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಎಂದರು.

ನೀವುಗಳು ಸಹ ನನಗೆ ಬೇಕಾದಷ್ಟು ತೊಂದರೆ ಕೊಡುತ್ತಿರುತ್ತೀರಿ. ಇಲ್ಲದೇ ಇರುವ ಹೊಸ ಸುದ್ದಿಗಳನ್ನು ಸೃಷ್ಟಿ ಮಾಡುತ್ತಾ ಇರುತ್ತೀರಿ. ಅದಕ್ಕಾಗಿ ನಿಮ್ಮಿಂದಲೂ ನಮಗೆ ರಕ್ಷಣೆ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಿರುತ್ತೇನೆ ಎಂದು ಹೇಳಿದರು.

ವೆಂಕಟೇಶ್ವರನ ಜೊತೆ ಲಕ್ಷ್ಮಿ ಸೇರಿದಂತೆ ವೈಕುಂಠ ಏಕಾದಶಿಯ ದಿನದಂದು ಈ ರಾಜ್ಯದ ಎಲ್ಲರ ಮನೆಯಲ್ಲೂ ಐಶ್ವರ್ಯ ಹೆಚ್ಚಾಗಲಿ ಎಂದು ಪ್ರಾರ್ಥಿಸುತ್ತೇನೆ. ಇದು ನಮ್ಮ ನಂಬಿಕೆ, ಆಚಾರ ವಿಚಾರ. ಧರ್ಮೋ ರಕ್ಷತಿ ರಕ್ಷಿತಃ ಅಂದರೆ ಧರ್ಮವನ್ನು ನಾವು ಉಳಿಸಿದರೆ ಧರ್ಮವು ನಮ್ಮನ್ನು ಉಳಿಸುತ್ತದೆ. ವಿಷ್ಣುವಿನ ಸ್ವರೂಪವಾದ ವೆಂಕಟೇಶ್ವರನ ದರ್ಶನವನ್ನು ರಾಜ್ಯದ ನಾನಾ ಕಡೆಗಳಲ್ಲಿ ಜನರು ಮಾಡುತ್ತಿದ್ದಾರೆ. ಎಲ್ಲರಿಗೂ ದೇವರ ಅನುಗ್ರಹ ದೊರೆಯಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.