ಮನುಷ್ಯತ್ವವೇ ನನ್ನ ನಂಬಿಕೆ: ಲಕ್ಷ್ಮೀ ಹೆಬ್ಬಾಳಕರ
Humanity is my belief: Lakshmi Hebbalkar
ಬೆಳಗಾವಿ, ಸೆ.6: ಜಾತಿ, ಪಂಥ ಹಾಗೂ ಭಾಷೆಗಿಂತ ಮನುಷ್ಯತ್ವದಲ್ಲಿ ನನಗೆ ನಂಬಿಕೆ ಇದೆ. ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಯನ್ನು ಸಮಾನ ದೃಷ್ಟಿಯಿಂದ ನೋಡುವುದೇ ನನ್ನ ಆಶಯ ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಣ್ಣೂರು ಗ್ರಾಮದಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಜೈನ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸುಮಾರು 70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಚರಂಡಿ, ಸಿಸಿ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗಳನ್ನೂ ಉದ್ಘಾಟಿಸಲಾಯಿತು.
ಜೈನ ಧರ್ಮವು ಜಗತ್ತಿಗೆ ಶಾಂತಿ, ಅಹಿಂಸೆ ಹಾಗೂ ಮಾನವೀಯತೆಯ ಶ್ರೇಷ್ಠ ಸಂದೇಶ ನೀಡಿದೆ. ‘ಅಹಿಂಸಾ ಪರಮೋ ಧರ್ಮಃ’ ಎಂಬ ಸಂದೇಶ ಜೈನ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ; ಇಡೀ ಮಾನವಕುಲಕ್ಕೆ ದಾರೀದೀಪವಾಗಿದೆ ಎಂದು ಹೇಳಿದರು.
ಭಗವಾನ್ ಮಹಾವೀರರು ನಿಷ್ಠೆ, ಸತ್ಯ, ತ್ಯಾಗ ಮತ್ತು ಅಹಿಂಸೆಯ ಮಾರ್ಗದಲ್ಲಿ ಬದುಕುವ ಸಂದೇಶ ನೀಡಿದ್ದಾರೆ. ಬಸವಣ್ಣನವರ ‘ದಯವೇ ಧರ್ಮದ ಮೂಲವಯ್ಯ’, ಯೇಸು ಕ್ರಿಸ್ತರ ಪ್ರೀತಿ, ಕ್ಷಮೆ, ಶಾಂತಿ ಹಾಗೂ ಪ್ರವಾದಿ ಮೊಹಮ್ಮದ್ ಅವರ ಮಾನವೀಯತೆಯ ಸಂದೇಶಗಳ ಸಾರ ಒಂದೇ ಆಗಿದೆ. ಎಲ್ಲ ಮಹಾನ್ ವ್ಯಕ್ತಿಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಮುದಾಯದ ಜನಸಂಖ್ಯೆ ಅಥವಾ ಮತಗಳ ಲೆಕ್ಕಾಚಾರ ಮಾಡದೆ, ಅಗತ್ಯವನ್ನು ಪರಿಗಣಿಸಿ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡಲಾಗಿದೆ. ಮಂಜೂರಾದ ಅನುದಾನವನ್ನು ಸಮರ್ಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ಕೈಗೊಂಡಿರುವುದು ಸಂತಸದ ವಿಚಾರ ಎಂದರು.
ನಾವು ಎಷ್ಟು ವರ್ಷ ಬದುಕುತ್ತೇವೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ನಾವು ಮಾಡಿದ ಉತ್ತಮ ಕೆಲಸ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆ ನಮ್ಮ ನಂತರವೂ ಉಳಿಯುತ್ತದೆ. ನಮ್ಮ ಮಾತಿಗಿಂತ ನಮ್ಮ ಕೆಲಸವೇ ಮಾತನಾಡಬೇಕು ಎಂದು ಹೆಬ್ಬಾಳಕರ ಹೇಳಿದರು.
ಜೈನ ಸಮುದಾಯ ಭವನ ಹಾಗೂ ಮುನಿ ನಿವಾಸವು ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಬೇಕು. ಮುಂದಿನ ಪೀಳಿಗೆಗೆ ಅಹಿಂಸೆ, ಸತ್ಯ, ತ್ಯಾಗ, ಪ್ರಾಮಾಣಿಕತೆ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಪರಿಚಯಿಸುವ ವೇದಿಕೆಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಯುವರಾಜ ಕದಂ, ಉಚಗಾಂವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳು ದೇಸೂರಕರ ಸೇರಿದಂತೆ ಗ್ರಾಮ ಪ್ರಮುಖರು ಹಾಗೂ ಜೈನ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 