ತಂದೆ-ತಾಯಿಯನ್ನು ಸ್ಮರಿಸುವ ಕಾರ್ಯ ಶ್ರೇಷ್ಠ: ಬಿಇಒ ಎಂ.ಬಿ. ಅಂಬಿಗೇರ

ತಂದೆ-ತಾಯಿಯನ್ನು ಸ್ಮರಿಸುವ ಕಾರ್ಯ ಶ್ರೇಷ್ಠ: ಬಿಇಒ ಎಂ.ಬಿ. ಅಂಬಿಗೇರ  Honouring one's parents is a noble act: BEO M.B. Ambigera

ಶಿಗ್ಗಾಂವಿ, ಜು. 28: ತಂದೆ-ತಾಯಿ ಮತ್ತು ಗುರುಗಳನ್ನು ಗೌರವಿಸಿ, ಅವರ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಎಂ.ಬಿ. ಅಂಬಿಗೇರ ಹೇಳಿದರು.  

ಪಟ್ಟಣದ 2ನೇ ಸರ್ಕಾರಿ ಕನ್ನಡ ಪ್ರೌಢಶಾಲೆಯಲ್ಲಿ ಮಾತೋಶ್ರೀ ಅನಸೂಯಾ ಫಕ್ಕೀರ​‍್ಪ ಯಳಿಗಾರ ಸೇವಾ ಸಂಸ್ಥೆಯ ವತಿಯಿಂದ ದಿ. ಫಕ್ಕೀರ​‍್ಪ ಯಳಿಗಾರ ಅವರ 5ನೇ ಪುಣ್ಯಸ್ಮರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ಸಂಚಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ತಂದೆ-ತಾಯಿಯನ್ನು ಸ್ಮರಿಸುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಯಳಿಗಾರ ಕುಟುಂಬ ಶಿಕ್ಷಣ ಹಾಗೂ ಸಮಾಜಮುಖಿ ಸೇವೆಗಳ ಮೂಲಕ ಉತ್ತಮ ಮಾದರಿಯಾಗಿದೆ. ವಿದ್ಯಾರ್ಥಿಗಳು ಪೋಷಕರು ಹಾಗೂ ಗುರುಗಳನ್ನು ಗೌರವಿಸಿ, ಅವರ ಸಲಹೆಗಳನ್ನು ಪಾಲಿಸಿದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಜಾವಿ ಕಾಲೇಜಿನ ಪ್ರಾಧ್ಯಾಪಕ ಶರೀಫ್ ಮಾಕಪ್ಪ, ಯಳಿಗಾರ ಕುಟುಂಬವು ತಂದೆ-ತಾಯಿಯ ಹೆಸರಿನಲ್ಲಿ ಸೇವಾ ಸಂಸ್ಥೆ ಸ್ಥಾಪಿಸಿ ಸಮಾಜಕ್ಕೆ ಆದರ್ಶ ಸಂದೇಶ ನೀಡುತ್ತಿದೆ. ಇಂತಹ ಕಾರ್ಯಗಳು ಯುವಜನತೆಗೆ ಸ್ಫೂರ್ತಿದಾಯಕವಾಗಿವೆ ಎಂದು ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ನಾಗಪ್ಪ ಬೆಂತೂರ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದು ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಗುರಿ ಸಾಧಿಸಬೇಕು ಎಂದು ಕರೆ ನೀಡಿದರು.  

ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಶಿವಾನಂದ ಹೊಸಮನಿ ಮಾತನಾಡಿ, ಯಳಿಗಾರ ಕುಟುಂಬವು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ನಿರಂತರವಾಗಿ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.  

ಕಾನಿಪ ರಾಜ್ಯ ಸಮಿತಿ ಸದಸ್ಯ ಪರಶುರಾಮ ಸತ್ಯಪ್ಪ ಮಾತನಾಡಿ, ಪತ್ರಕರ್ತ ಸುರೇಶ ಯಳಿಗಾರ ಅವರು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದು ಮಾದರಿಯಾಗಿದೆ ಎಂದು ಪ್ರಶಂಸಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯಿನಿ ವಿನೋದಾ ಪಾಟೀಲ ಮಾತನಾಡಿ, ಶಿಕ್ಷಣವೇ ಬದುಕಿನ ದೊಡ್ಡ ಆಸ್ತಿ. ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.  

ಈ ಸಂದರ್ಭದಲ್ಲಿ ಮಾತೋಶ್ರೀ ಅನಸೂಯಾ ಫಕ್ಕೀರ​‍್ಪ ಯಳಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಸುರೇಶ ಯಳಿಗಾರ, ಉಪಾಧ್ಯಕ್ಷ ಬಸವರಾಜ ಯಳಿಗಾರ, ಕಾರ್ಯದರ್ಶಿ ಲತಾ ಯಳಿಗಾರ, ಕಾನಿಪ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ವೀರೂಪಾಕ್ಷಪ್ಪ ನೀರಲಗಿ, ಪತ್ರಕರ್ತ ಸಿದ್ರಾಮಗೌಡ ಮೆಳ್ಳಾಗಟ್ಟಿ, ದೇವರಾಜ ಯಳಿಗಾರ, ನಿಂಗಪ್ಪ ಯಳಿಗಾರ, ದರ್ಶನ್ ಯಳಿಗಾರ, ಮುದಕಪ್ಪ ಕುಂದಗೋಳ, ಶಿಕ್ಷಕರಾದ ಸಿ.ಎಸ್‌. ಚರಂತಿಮಠ, ಬಸವರಾಜ ಬಸರಿಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.