ನಿವೃತ್ತ ಮುಖ್ಯ ಶಿಕ್ಷಕ ಬಿಷ್ಟನಗೌಡ್ರಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತ ಮುಖ್ಯ ಶಿಕ್ಷಕ ಬಿಷ್ಟನಗೌಡ್ರಗೆ  ಹೃದಯಸ್ಪರ್ಶಿ ಬೀಳ್ಕೊಡುಗೆ Heartwarming farewell to retired headmaster Bishtanagoudra

ಲೋಕದರ್ಶನ ವರದಿ 

ಹಾವೇರಿ  11: ನಗರದ ಲೂಡೋಲ್ಪ ಪ್ರೌಢಶಾಲೆಯ ಸೇವಾ ನಿವೃತ್ತಿಗೊಂಡ ಮುಖ್ಯ ಶಿಕ್ಷಕ ನೀಲನಗೌಡ ಬಿಷ್ಟನಗೌಡ್ರು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕಾರ್ಯಕ್ರಮ ಶಾಲಾ ಆಡಳಿತ ಮಂಡಳಿ, ವಿವಿಧ ಶಾಲೆಗಳ ಮುಖ್ಯಸ್ಥರು, ಅಭಿಮಾನಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳ ಮಧ್ಯೆ ನಡೆಯಿತು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸಿದ್ದೇಶ್ವರ ಕಾಡದೇವರಮಠ ನಿವೃತ್ತರನ್ನು ಸನ್ಮಾನಿಸಿ ಮಾತನಾಡಿ ವೃತ್ತಿಗೆ ನಿವೃತ್ತಿ ಇದೆ ವಿನಃ ಅವರ  ಪ್ರವೃತ್ತಿಗಲ್ಲ. ಅವರ ಸೇವಾ  ನಿಷ್ಠೆ ಎಲ್ಲರಿಗೂ ಅನುಕರಣೀಯ, ಮುಂದೆಯೂ ಅವರ ಸೇವೆ ಇಲ್ಲಿ ಮಕ್ಕಳಿಗೆ ದೊರೆಯಬೇಕು.  

ನಿವೃತ್ತಿಗೊಂಡ ಹುದ್ದೆಗಳಿಗೆ ನೇಮಕಾತಿ, ಶಿಕ್ಷಕರ ನೇಮಕಕ್ಕೆ ಖಾಸಗಿ ಶಾಲೆಗಳಲ್ಲಿ ಅವಕಾಶವಿಲ್ಲ. ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು ನಿವೃತ್ತಿ ವೇತನವಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಸರ್ಕಾರದ ಮಲತಾಯಿ ಧೋರಣೆಯ ವಿರುದ್ಧ ಸಂಘಟಿತರಾಗುವುದು ಅವಶ್ಯವಿದೆ ಎಂದು ಹೇಳಿದರು.ತಾಲೂಕ ಪರಿಸರ ವೇದಿಕೆಯ ಅಧ್ಯಕ್ಷೆ ಡಾ. ಮಾಧುರಿ ದೇವಧರ ವೇದಿಕೆಯಿಂದ ಎಂಟನೇ ವರ್ಗದ 35 ವಿದ್ಯಾರ್ಥಿಗಳಿಗೆ ಬ್ಯಾಗಗಳನ್ನು ವಿತರಿಸಿ ಮಾತನಾಡಿ ಉತ್ತಮ ಶಿಕ್ಷಕರಿಂದ ಉತ್ತಮ ವಿದ್ಯಾರ್ಥಿಗಳು ನಿರ್ಮಾಣವಾಗುತ್ತಾರೆ. ಅವರಲ್ಲಿ ಪರಿಸರ ಪ್ರಜ್ಞೆ ,ಭಾವೈಕ್ಯತೆ, ಸಂಸ್ಕಾರಗಳ ಬೀಜಗಳನ್ನು ಬಿತ್ತಬೇಕು ಎಂದರು. ಇನ್ನರವಿಲ್ ಕ್ಲಬ್ ಅಧ್ಯಕ್ಷೆ ವನಿತಾ ಮಾಗನೂರ ಮಾತನಾಡಿ ನಮ್ಮ ಕ್ಲಬ್ಬಿನಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ನೀಡುವ, ಆರೋಗ್ಯ, ನೇತ್ರದಾನ, ರಕ್ತದಾನ ಮುಂತಾದ ಶಿಬಿರಗಳನ್ನು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು,  

ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. ಸಾಹಿತಿ ಹನುಮಂತಗೌಡ ಗೊಲ್ಲರ ಅತಿಥಿಯಾಗಿ ಮಾತನಾಡಿ  ಮನುಷ್ಯನಾಗಿ ಹುಟ್ಟುವುದು ಭಾಗ್ಯ, ಶಿಕ್ಷಕರಾಗಿ ಸೇವೆ ಸಲ್ಲಿಸುವುದು ಸೌಭಾಗ್ಯ. ಮಕ್ಕಳನ್ನು ಅಂಕಗಳಿಸುವ ಯಂತ್ರಗಳನ್ನಾಗಿಸದೇ ಸಮಾಜ ಮುಖಿಗಳಾಗುವತ್ತ ಚಿಂತಿಸಬೇಕಾಗಿದೆ. ಬಡತನ, ಅವಮಾನಗಳನ್ನು ಸವಾಲಾಗಿ ಸ್ವೀಕರಿಸಿ, ಗುರಿ ಸಾಧನೆಗೆ ನಿರಂತರ ಶ್ರಮ, ನಿಷ್ಠೆ, ಪ್ರಾಮಾಣಿಕತೆ ಮೌಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ಕಲ್ಲೆದೇವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ್ ಮಾತನಾಡಿ ಜನಮನವನ್ನು ಗೆಲ್ಲುವುದಕ್ಕಿಂತ ಮಕ್ಕಳ ಮನವನ್ನು ಶಿಕ್ಷಕರು ಗೆಲ್ಲಬೇಕು,  ಎಲ್ಲ ವೃತ್ತಿಗಳಲ್ಲಿ ಇದು ಶ್ರೇಷ್ಠ ವೃತ್ತಿ. ಇದರ ಘನತೆ, ಗೌರವವನ್ನು  ಕಾಪಾಡೋಣ, ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಮಕ್ಕಳೇ ನಮ್ಮ ನಿಜವಾದ ಮೌಲ್ಯಮಾಪಕರು ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಸುರೇಶ ಕುಡಪಲಿ, ಶ್ರೀಪಾದ್ ದಳವಾಯಿ ಮಾತನಾಡಿ ನಿವೃತ್ತಿ ಜೀವನ ಸುಖಮಯವಾಗಲಿ, ಪರ್ಯಾಯ ವ್ಯವಸ್ಥೆ ಆಗುವವರೆಗೆ ಬಿಷ್ಟನಗೌಡ್ರು ಗೌರವ ಸೇವೆ ಮುಂದುವರಿಸಬೇಕು ಎಂದು ಮನವಿ ಮಾಡಿಕೊಂಡರು.  

ಸಂಸ್ಥೆಯ ಅಧ್ಯಕ್ಷ ರತ್ನಾಕರ ಪುನೀತ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ 8ನೇ ವರ್ಗದ ವಿದ್ಯಾರ್ಥಿಗಳ ಸ್ವಾಗತವು ನಡೆಯಿತು. ಹಿರಿಯ ವಿದ್ಯಾರ್ಥಿ ನಾಟಕಕಾರ ಗುರುರಾಜ ಸೋಮಣ್ಣವರ್ ಮಾತನಾಡಿ ಎಲ್ಲ ವಿದ್ಯಾರ್ಥಿಗಳಿಗೆ ನೋಟ್ ಬುಕ್ಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ನೀಡುವುದಾಗಿ ತಿಳಿಸಿದರು. ನಿವೃತ್ತ ಮುಖ್ಯ ಶಿಕ್ಷಕಿ ಚಂಪಾವತಿ ಕೆಂಚನಗೌಡ್ರು, ಜಿ.ಡಿ. ಪಾಟೀಲ, ನೋವೆಲ್ ಅರವಟಗಿ, ಪ್ರಕಾಶ ಅಂದ್ರಾಳ, ಎಸ್‌.ಡಿ. ಕರಿದ್ಯಾಮಣ್ಣವರ, ಶಿವರಾಜ್ ಕೋಟಕ್, ಶಿವಕುಮಾರ್ ಹಿರೇಮಠ, ಧಾರವಾಡದ ಎಸ್‌.ಎಸ್‌. ಕತ್ತೆಬೆನ್ನೂರ, ಮುನ್ಸಿಪಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಜಾಗಟಗೇರಿ ಮತ್ತಿತರರು ಬಿಷ್ಟನಗೌಡ್ರು ಅವರನ್ನು ಗೌರವಿಸಿದರು. ನಿವೇದಿತಾ, ಭೂಮಿಕಾ, ಕವನ, ಪದ್ಮ ಪ್ರಾರ್ಥಿಸಿದರು.ಎನ್‌.ಎನ್‌.ಕುಂದೂರ ನಿರೂಪಿಸಿದರು. ಮುಖ್ಯಾಧ್ಯಾಪಕ ಎಂ.ಎಸ್‌. ನಿಷ್ಠನಗೌಡ್ರು ಸ್ವಾಗತಿಸಿದರು. ಸಹ ಶಿಕ್ಷಕ ಎಸಸ್‌.ಎಸ್‌.ಗಚ್ಚಿನ ವಂದಿಸಿದರು.