ಮುಖ್ಯ ಶಿಕ್ಷಕಿ ನಿರ್ಮಲಾ ಮಾನೆ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

ಮುಖ್ಯ ಶಿಕ್ಷಕಿ ನಿರ್ಮಲಾ ಮಾನೆ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ  Heartfelt farewell to Headmistress Nirmala Mane

ರಾಣೆಬೆನ್ನೂರು 3: ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ಬರುವವರು ಪೂರ್ವಜನ್ಮದ ಪುಣ್ಯವಂತರಾಗಿರಬೇಕು. ‘ಗುರು’ ಎನ್ನುವ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಶಿಕ್ಷಕರು ತಮ್ಮ ಜೀವನವನ್ನು ವಿದ್ಯಾರ್ಥಿಗಳ ಸರ್ವಾಂಗೀಣ ಶಿಕ್ಷಣಕ್ಕೆ ಮೀಸಲಿಟ್ಟರೆ ಸಮಾಜ ಅವರನ್ನು ಸದಾ ಸ್ಮರಿಸುತ್ತದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಹೇಳಿದರು.  

ತಾಲೂಕಿನ ದೇವರಗುಡ್ಡ (ಗುಡ್ಡ ಗುಡ್ಡಾಪುರ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ನಿರ್ಮಲಾ ಕೃಷ್ಣಕುಮಾರ ಮಾನೆ ಅವರ ನಿವೃತ್ತಿ ನಿಮಿತ್ತ ಆಯೋಜಿಸಿದ್ದ ಅಭಿನಂದನಾ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.  

ನಾಲ್ಕು ದಶಕಗಳ ಸೇವೆಗೆ ಮೆಚ್ಚುಗೆ  

ನಿರ್ಮಲಾ ಮಾನೆ ಅವರು ಕೇವಲ ಶಿಕ್ಷಕಿಯಾಗಿ ಮಾತ್ರವಲ್ಲದೆ, ಸಾಂಸ್ಕೃತಿಕ, ಸಾಹಿತ್ಯ, ಕಾವ್ಯ, ಸಂಸ್ಕೃತಿ, ಸಂಸ್ಕಾರ, ನೀತಿ ಬೋಧನೆ ಹಾಗೂ ವಿವಿಧ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸಿದ್ದಾರೆ. ಇಂತಹ ಮೌಲ್ಯಗಳನ್ನು ಪ್ರತಿಯೊಬ್ಬ ಶಿಕ್ಷಕರೂ ಅಳವಡಿಸಿಕೊಳ್ಳಬೇಕು ಎಂದು ಶ್ಯಾಮಸುಂದರ ಅಡಿಗ ಹೇಳಿದರು.  

"ಶಿಕ್ಷಣ ಸೇವೆಯೇ ನನ್ನ ಜೀವನದ ತೃಪ್ತಿ"  

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಮಲಾ ಮಾನೆ ಅವರು, ತಮ್ಮ 40 ವರ್ಷಗಳ ಸೇವಾ ಅವಧಿಯಲ್ಲಿ ಮೊಟೇಬೆನ್ನೂರು, ಹರಗೇರಿ, ಯಕ್ಕಲಸಪುರ, ಮಾಗೋಡು ಹಾಗೂ ದೇವರಗುಡ್ಡ ಸೇರಿದಂತೆ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿರುವುದು ಜೀವನದ ಹೆಮ್ಮೆ ಮತ್ತು ತೃಪ್ತಿ ತಂದಿದೆ ಎಂದರು.  

ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮಾಜದಿಂದ ದೊರೆತ ಪ್ರೀತಿ, ವಿಶ್ವಾಸ ಮತ್ತು ಗೌರವವೇ ತಮ್ಮ ಜೀವನದ ದೊಡ್ಡ ಸಂಪತ್ತು. ಶಿಕ್ಷಕರಾಗಿ ನೀಡಿದ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳು ಮಕ್ಕಳ ಭವಿಷ್ಯ ರೂಪಿಸಲು ಸಹಕಾರಿಯಾಗಿದ್ದರೆ ಅದುವೇ ತಮ್ಮ ಸೇವೆಯ ಸಾರ್ಥಕತೆ ಎಂದು ಭಾವನಾತ್ಮಕವಾಗಿ ನುಡಿದರು.  

ಗಣ್ಯರ ಉಪಸ್ಥಿತಿ  

ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ಎನ್‌. ಸಂಸಿ ಅಧ್ಯಕ್ಷತೆ ವಹಿಸಿದ್ದರು.  

ವೇದಿಕೆಯಲ್ಲಿ ಬಿಆರ​‍್ಿ ಸಮನ್ವಯಾಧಿಕಾರಿ ಮಂಜು ನಾಯಕ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ವಿ. ಆಡಿವೇರ್, ಸಿಆರ​‍್ಿ ದಿವ್ಯಾ ಬಿ., ಪ್ರಭಾರಿ ಮುಖ್ಯ ಶಿಕ್ಷಕ ಬಸವರಾಜ ಎಂ.ಎಸ್‌., ನಿರ್ದೇಶಕ ಬಿ.ಎಚ್‌. ಕಿತ್ತೂರು, ಶ್ರೀಮತಿ ಸಾವಿತ್ರಮ್ಮ ಹೆಚ್‌.ಬಿ., ಮಹಾದೇವಪ್ಪ ತೋಟದ, ಹೆಚ್‌.ಎಸ್‌. ಹೊಸಳ್ಳಿ ಸೇರಿದಂತೆ ವಿವಿಧ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಶಿಕ್ಷಕರ ಸಂಘಟನೆಗಳ ಮುಖಂಡರು, ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.  

ಕವಿತಾ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ತಿಪ್ಪೇಸ್ವಾಮಿ ಹಳ್ಳದದಂಡಿ ಸ್ವಾಗತಿಸಿದರು. ಶಿಕ್ಷಕಿ ಎ. ಕುಮುದಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.