ರಾಣಿಬೆನ್ನೂರಲ್ಲಿ ಹಾವೇರಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ

ರಾಣಿಬೆನ್ನೂರಲ್ಲಿ ಹಾವೇರಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ Haveri District's First Sharan Sahitya Sammelana at Ranibennur

                       ರಾಣೆಬೆನ್ನೂರು 30 : ( ಹೇಳವನಕಟ್ಟಿ ಗಿರಿಯಮ್ಮ ವೇದಿಕೆ ) ಹಾವೇರಿ ಜಿಲ್ಲೆ ನಾಡಿನ ಶರಣರು, ಸಂತರು,ಧಾರ್ಶನಿಕರು, ಮಹಾನ ತಪಸ್ವಿಗಳು ಮತ್ತು ಮಠ ಪೀಠಗಳು ಸ್ಥಾಪಿಸಿ  ಧರ್ಮ ಜ್ಞಾನ ಚಕ್ಸುಗಳು ಜನ್ಮ ತಳೆದ ಬಹುದೊಡ್ಡ ಧಾರ್ಮಿಕ ಸಂಸ್ಕೃತಿಯ ಪರಂಪರೆಯ ನಾಡಾಗಿದೆ. ಇಂತಹ ಧರ್ಮ ಸಂಸ್ಕೃತಿ ಪರಂಪರೆಯ  ಶರಣರ ನಾಡಿನಲ್ಲಿ ಜರುಗುತ್ತಿರುವ  ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ತಮಗೆ ಅತ್ಯಂತ ಸಂತೋಷ ನೀಡಿದೆ ಎಂದು ಸುತ್ತೂರು ಮಹಾಸಂಸ್ಥಾನ ಮಠದ ಜಗದ್ಗುರು, ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ನುಡಿದರು. ಅವರು ಸೋಮವಾರ, ನಾಗಶಾಂತಿ ಕಾಲೇಜು ಹೇಳವನಕಟ್ಟಿ ಗಿರಿಯಮ್ಮ ವೇದಿಕೆಯಲ್ಲಿ ಆಯೋಜನೆಗೊಂಡಿದ್ದ, ಹಾವೇರಿ ಜಿಲ್ಲಾ ಪ್ರಥಮ  ಶರಣ ಸಾಹಿತ್ಯ ಸಮ್ಮೇಳನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ನಾಲ್ಕು ದಶಕಗಳ ಹಿಂದೆ ಆರಂಭವಾಗಿರುವ ಶರಣ ಸಾಹಿತ್ಯ ಪರಿಷತ್ತು ಹಿಂದಿನ ಜಗದ್ಗುರುಗಳ ಆಶಯದಂತೆ ನಾಡಿನ ಸಮಗ್ರ ಶರಣ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಲ್ಲಿದೆ ಎಂದರು.

                     ತನ್ನ ಧಾರ್ಮಿಕ ದತ್ತಿ ನಿಧಿಯಿಂದ ಇಂದಿನವರೆಗೂ, ರಾಜ್ಯದಾದ್ಯಂತ ಕಾವ್ಯ, ಸಾಹಿತ್ಯ, ಮತ್ತು ಶರಣ  ಸಂಸ್ಕೃತಿ ಮತ್ತು ಶರಣ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಗಿದ್ದೇವೆ. ಬಸವಣ್ಣನವರು ಕಂಡ ಸಮ ಸಮಾಜದ ನಿರ್ಮಾಣ, ಸಾಹಿತ್ಯದ ಉದಾತ್ತ ಸಂಸ್ಕೃತಿಯ ಪರಂಪರೆ, ಇಂದಿಗೂ ಸಾಗಿದೆ, ಇದು ನಿರಂತರ ಸೂರ್ಯ ಚಂದ್ರರು ಮತ್ತು ಭೂಮಿ ಇರುವವರೆಗೂ ಸಾಗುತ್ತಲೇ ಇರುತ್ತದೆ ಎಂದರು. ಶರಣರು ಮತ್ತು ಶರಣ ಸಾಹಿತ್ಯ ಪರಿಷತ್ತು ಈ ನಾಡಿಗೆ ಮೌಲ್ಯಯುತವಾದ ಸಂಸ್ಕಾರ ಭರಿತ ಸಾಹಿತ್ಯ ಸಂಪತ್ತು ಕೊಡುಗೆಯಾಗಿ ನೀಡಿದೆ ಎಂದು ವಿವರಿಸಿ ಮಾತನಾಡಿದ ಶ್ರೀಗಳು, ಮನುಕುಲ ಸಮಾನತೆ ಮತ್ತು ಸಂಸ್ಕಾರಯುತವಾಗಿ ಅತ್ಯಂತ ಪ್ರೀತಿ ಮತ್ತು ವಿಶ್ವಾಸದಿಂದ ಬದುಕು ಸಾಗಿಸಬೇಕಾದರೆ ಶರಣ ಸಾಹಿತ್ಯ  ಮತ್ತು ಧರ್ಮದ ತಳಹದಿಯ  ತತ್ವದಲ್ಲಿ ಪ್ರತಿಯೊಬ್ಬ ಮಾನವ ಜೀವಿಯು ಜೀವಿಸಬೇಕಾದ ಇಂದಿನ ಅಗತ್ಯವಿದೆ. ಎಂದು ಶ್ರೀಗಳು ತಮ್ಮ ಆಶೀರ್ವಚನ ಸಂದೇಶ ನೀಡಿದರು.     

                     ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನಾ ಧ್ಯಕ್ಷರಾಗಿದ್ದ, ಸಾಣೇಹಳ್ಳಿ ಶ್ರೀ   ತರಳಬಾಳು ಶಾಖಾ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು, ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ಸಂಸ್ಕೃತಿ ಆಚಾರ ವಿಚಾರ ಮತ್ತು ಧರ್ಮ ಪ್ರಚಾರ ಬೇರೆ ಬೇರೆ ದೇಶದವರು ಅನುಸರಿಸುತ್ತಿರುವುದು ನಮ್ಮ ದೇಶದ ಹೆಗ್ಗಳಿಕೆ. ಆಧುನಿಕ ಜೀವನ ಬದುಕು ಇಂದು  ಬಹುತೇಕ  ನೈತಿಕ ಜಾಡ್ಯತೆ ಆವರಿಸುತ್ತಿದೆ. ಆದರ್ಶಗಳಲ್ಲಿ ಸ್ತಾವರತ್ವ ಎದ್ದು ತೋರುತ್ತಿದೆ. ಮನುಷ್ಯ ಹೊತ್ತು ಬಂದಂತೆ ಕೊಡೆ ಹಿಡಿಯದೆ, ನೈತಿಕ ನೆಲೆಗಟ್ಟು ಕುಸಿಯದಂತೆ, ಆದರ್ಶಗಳು ಗಾಳಿ ಪಾಲಾಗದಂತೆ, ಜವಾಬ್ದಾರಿಯುತ ಬದುಕನ್ನು ಅಪ್ಪಿಕೊಳ್ಳುವ ಸಂಕಲ್ಪವನ್ನು ತಳೆಯಬೇಕು ಆವಾಗ ಮಾತ್ರ ಸ್ತಾವರತ್ವದಿಂದ ಜಂಗಮತ್ವದೆಡೆಗೆ, ಜಡತ್ವದಿಂದ ಚೈತನ್ಯದೆಡೆಗೆ ಸಾಗಲು ಸಾಧ್ಯ ಮನುಷ್ಯನಿಗೆ ಗೌರವ ಬರುವುದು ಸನ್ನಡತೆ, ಸಂಸ್ಕೃತಿ, ಸಂಸ್ಕಾರದಿಂದ ಎನ್ನುವುದನ್ನು ಯಾರೊ ಮರೆಯಬಾರದು ಎಂದು ಶ್ರೀಗಳು ಹೇಳಿದರು.

                     ಇಂದಿನ ದಿನಮಾನಗಳಲ್ಲಿ ನ್ಯಾಯ, ಅನ್ಯಾಯ ಎಂದು  ಪರಾಮರ್ಶಿಸುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ಇದು ಈ ದೇಶದ ದೊಡ್ಡ ದುರಂತ. ಅನ್ಯಾಯವನ್ನು ಪ್ರತಿಭಟಿಸುವ, ಸತ್ಯವನ್ನು ಎತ್ತಿ ಹಿಡಿಯುವ ಗಟ್ಟಿತನ, ದಿಟ್ಟ ಮನೋಭಾವ ಸಾರ್ವಜನಿಕರಲ್ಲಿ ಮರೆಯಾಗುತ್ತಿರುವುದು ವಿಷಾಧನೀಯ  ಎಂದರು.   ಬಸವಾದಿ ಶರಣರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಪಂಚಾಚಾರಗಳಲ್ಲಿ "ಗಣಾಚಾರ"ವೂ ಒಂದು. ಅದು ಹೇಳುವುದು ವ್ಯಕ್ತಿಗತ ಹಿತ ಮತ್ತು ಸಾಮಾಜಿಕ ಹಿತರಕ್ಷಣೆಯನ್ನು. ಅನ್ಯಾಯ ಎಲ್ಲೇ ಕಂಡರೂ, ಯಾರೇ ಮಾಡಿದರೊ ಅದು ಪ್ರತಿಭಟಿಸಬೇಕಾದ್ದು ಧರ್ಮ. ಸಾಮಾಜಿಕ, ಧಾರ್ಮಿಕ, ನೈತಿಕ, ಸಾಂಸ್ಕೃತಿಕ ಅಥವಾ ಮತ್ಯಾವುದೇ ಕ್ಷೇತ್ರದಲ್ಲಿ ಅನ್ಯಾಯ ಅಪರಾಧ ಆಗಿರಬಹುದು ಅದು ಅಪರಾಧ. ಅನ್ಯಾಯ ಎಂದು ಗೊತ್ತಿದ್ದೂ ಪ್ರತಿಭಟಿಸದಿದ್ದರೆ ಪಲಾಯನವಾಗುವುದು. ಶರಣ ಸಂಸ್ಕೃತಿ ಪಲಾಯನವಾದವನ್ನು ಹೇಳುವುದಿಲ್ಲ. ಇವತ್ತು ಸಮಾಜದಲ್ಲಿ ನೈತಿಕ ಮೌಲ್ಯಗಳ ಕುಸಿತ ನೀರೀಕ್ಷೆಗಿಂತ ವೇಗವಾಗಿ ಆಗುತ್ತಲಿವೆ. 

                  ತಪ್ಪುಗಳನ್ನು ಖಂಡಿಸದೆ ಅದೇ ಸರಿ ಎನ್ನುವ ಕುತ್ಚ್ತ ತ ಮನೋಭಾವ ಬೆಳೆಯುತ್ತದೆ. ಎಲ್ಲದಕ್ಕೂ ರಾಜಿ ಮಾಡಿಕೊಳ್ಳುವ ಪ್ರವರ್ತಿ ಹೆಚ್ಚುತ್ತಿದೆ. ಇದರಿಂದ ಸಮಾಜದಲ್ಲಿ ಅಪರಾಧಗಳು ಹೆಚ್ಚುತ್ತವೆ, ಭ್ರಷ್ಟಾಚಾರ ಮಿತಿಮೀರುತ್ತದೆ. ಪ್ರಾಮಾಣಿಕ ವ್ಯಕ್ತಿಗಳಿಗೆ ಬೆಲೆ ಇಲ್ಲದಂತಾಗುತ್ತದೆ ಎಂದು ನುಡಿದ ಶ್ರೀಗಳು ಪ್ರತಿಯೊಬ್ಬ ಮನುಷ್ಯನು ಧರ್ಮ ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನ ಪಾವನವಾಗುವುದು. ಸತ್ಯ ಮಾರ್ಗವು  ಸದಾಕಾಲ ಶಾಂತಿ ಮತ್ತು ನೆಮ್ಮದಿ ನೀಡುತ್ತದೆ ಎಂದರು.      ಸಮಾರಂಭ ಉದ್ಘಾಟಿಸಿದ ಶಾಸಕ ಪ್ರಕಾಶ ಕೋಳಿವಾಡ ಅವರು ವಚನ ಸಾಹಿತ್ಯವೆಂದರೆ ಕೇವಲ ಕಾವ್ಯವೆಂದು ತಿಳಿಯುವುದಲ್ಲ. ವಚನ ಸಾಹಿತ್ಯ ಪ್ರತಿಯೊಬ್ಬ ಮಾನವ ಜೀವಿಗೆ ದಾರೀದೀಪವಾಗಿದೆ. ಪ್ರಾಣಿ ಪಕ್ಷಿಗಳಲ್ಲಿರುವ ಸಾಮರಸ್ಯ ಮಾನವ ಜೀವಿಗಳಲಿಲ್ಲ. ತಾವು ಬುದ್ಧ ಬಸವ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇವೆ. 12ನೇ ಶತಮಾನ ಮೂಢನಂಬಿಕೆಗಳ ಕಾಲ. ಅಕ್ಕಮಹಾದೇವಿ ಹೇಮರೆಡ್ಡಿ ಮಲ್ಲಮ್ಮ ಸಮಾನತೆಗೆ ತಂದವರು.

                    ಮನುಷ್ಯ ಮೂಲತಃ ಒಳ್ಳೆಯವರು.ಒಳ್ಳೆ ಮನಸ್ಸುವುಳ್ಳವರು ಎಲ್ಲ ಕಾಲಕ್ಕೂ ಕೀಚಕ, ರಾವಣ, ಜರಾಸಂಧ ಶಕುನಿ ಇಂದು ಇದ್ದಾರೆ ಮುಂದೆ ಇರುತ್ತಾರೆ. ಪಾಶ್ಚಾತ್ಯ ರಾಷ್ಟ್ರಗಳು ಮುಂದುವರೆದ ರಾಷ್ಟ್ರವಾಗುತ್ತಿರುವುದು ಅಲ್ಲಿನ ಸಮಾನತೆ, ಪ್ರೀತಿ ವಿಶ್ವಾಸ, ದೇಶಾಭಿಮಾನ ಮುಖ್ಯ ಕಾರಣವಾಗಿದೆ. ನಮ್ಮ ದೇಶದಲ್ಲಿಯೂ ಅದನ್ನು ಅಳವಡಿಸಿಕೊಂಡಾಗ ಮಾತ್ರ ಭಾರತ ದೇಶ ಮತ್ತಷ್ಟು ಬಲಿಷ್ಠವಾಗಲು ಸಾಧ್ಯವಾಗುವುದು ಎಂದರು.  ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು. ದಿವ್ಯ ಸಾನಿಧ್ಯವನ್ನು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು, ದೊಡ್ಡಪೇಟೆ ವಿರಕ್ತಮಠದ ಶ್ರೀ ಗುರುಬಸವ ಸ್ವಾಮಿಗಳು, ಗುಡ್ಡದ ಆನ್ವೇರಿ ಶಿವಯೋಗಿಶ್ವರ ಸ್ವಾಮಿಗಳು ವಹಿಸಿದ್ದರು. ಮಾಜಿ ಶಾಸಕ ಅರುಣ ಕುಮಾರ ಪೂಜಾರ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು, ಶ್ರೀ ಶಿವಯೋಗಿ ಸಿದ್ದರಾಮ ಶ್ರೀಗಳು ಕೃತಿ   ಬಿಡುಗಡೆಗೊಳಿಸಿ ಮಾತನಾಡಿದರು.

                   ಕಾರ್ಯದರ್ಶಿ ಸೋಮಶೇಖರ್ ಗಾಂಜಿ, ಎಸ್‌.ಎಸ್‌. ರಾಮಲಿಂಗಣ್ಣನವರ, ವಾಸಣ್ಣ ಕುಸಗೂರ, ಎಸ್ ಬಿ. ಗುರಿಕಾರ್ ಜಿ.ಜಿ. ಹೊಟ್ಟಿಗೌಡ್ರ, ಸುಧೀರ್ ಕುರುವತ್ತಿ, ಭಾರತಿ ಜಂಬಿಗಿ, ವ್ಹಿ. ಪಿ. ಲಿಂಗನಗೌಡ್ರ,ಕಲಾವಿದೆ ರಜನಿ ಕರಿಗಾರ ಪ್ರಾರ್ಥಿಸಿ, ಸಂಗೀತ ಸೇವೆ ಸಲ್ಲಿಸಿದರು.ತಾಲೂಕ ಅಧ್ಯಕ್ಷ  ರಾಜೇಶ್ವರಿ ಪಾಟೀಲ್, ಸ್ವಾಗತಿಸಿದರು. ಮಾರುತಿ ಶಿಡ್ಲಾಪುರ  ಆಶಯನುಡಿ ನುಡಿಯಾಡಿದರು.ಜಯಶ್ರೀ ನೀರಲಿಗಿಮಠ ಜಗದೀಶ  ಮಳಿಮಠ, ನಿರೋಪಿಸಿದರು. ಕಾರ್ಯದರ್ಶಿ ಎಸ್‌. ಹೆಚ್‌. ಪಾಟೀಲ್  ವಂದಿಸಿದರು ಶರಣ ಸಮ್ಮೇಳನದಲ್ಲಿ ಜಿಲ್ಲೆಯಸಾವಿರಾರು ಶರಣ- ಶರಣೆಯರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ಕೆ. ಇ. ಬಿ.ವಿನಾಯಕ ದೇವಸ್ಥಾನದಿಂದ ಹೊರಟ ಭವ್ಯ  ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ,  ಸಭಾವೇದಿಕೆಗೆ ಸಾಂಗತ್ಯಗೊಂಡಿತು. ನಂತರ ವಚನ ಗಾಯನ ಸಂಗೀತ, ನೃತ್ಯ, ಜನಪದ, ಸುಗಮ ಸಂಗೀತ  ಸೇರಿದಂತೆ ಮತ್ತಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಸಾರ್ವಜನಿಕರ ಗಮನ ಸೆಳೆದವು.