ಲೋಕೋಪಯೋಗಿ ಖಾತೆಯನ್ನೇ ಮುಂದುವರಿಸಿದ್ದಕ್ಕೆ ಸಂತೋಷವಿದೆ: ಸಚಿವ ಸತೀಶ್ ಜಾರಕಿಹೊಳಿ

ಲೋಕೋಪಯೋಗಿ ಖಾತೆಯನ್ನೇ ಮುಂದುವರಿಸಿದ್ದಕ್ಕೆ ಸಂತೋಷವಿದೆ: ಸಚಿವ ಸತೀಶ್ ಜಾರಕಿಹೊಳಿ Happy to continue with the Public Works Department: Minister Satish Jarkiholi

ಗೋಕಾಕ 07 : ನಾನು ಪಕ್ಷದ ಹೈಕಮಾಂಡ್ ಅಥವಾ ಮುಖ್ಯಮಂತ್ರಿಗಳ ಬಳಿ ಯಾವುದೇ ನಿರ್ದಿಷ್ಟ ಖಾತೆ ಕೇಳಿರಲಿಲ್ಲ. ಮುಂಚೆ ನನ್ನ ಬಳಿ ಇದ್ದ ಲೋಕೋಪಯೋಗಿ ಇಲಾಖೆಯನ್ನೇ ಅವರೇ ನನಗೆ ವಹಿಸಿಕೊಟ್ಟಿದ್ದಾರೆ," ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಗೋಕಾಕ ನಗರದ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ತಾವಾಗಿಯೇ ಯಾವುದೇ ಇಲಾಖೆಗಾಗಿ ಬೇಡಿಕೆ ಇಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಮುಖ್ಯಮಂತ್ರಿಗಳು ಹಾಗೂ ಪಕ್ಷದ ನಾಯಕತ್ವವೇ ಯೋಚಿಸಿ ಈ ಹಿಂದಿನ ಲೋಕೋಪಯೋಗಿ ಖಾತೆಯನ್ನೇ ತಮಗೆ ನೀಡಿದ್ದಾರೆ ಎಂದು ತಿಳಿಸಿದರು. ಮೂರು ವರ್ಷದ ಕೆಲಸದ ತೃಪ್ತಿ: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ರಾಜ್ಯಾದ್ಯಂತ ಹಲವು ಪ್ರಮುಖ ರಸ್ತೆ, ಸೇತುವೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಸಂಪೂರ್ಣ ತೃಪ್ತಿ ನನಗಿದೆ.

"ಈಗ ಮತ್ತೊಮ್ಮೆ ಅದೇ ಇಲಾಖೆ ದೊರೆತಿರುವುದು ಸಂತೋಷ ತಂದಿದೆ. ಈ ಹಿಂದೆ ಆರಂಭಿಸಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಇದು ಸಹಕಾರಿಯಾಗಲಿದೆ" ಎಂದು ಹರ್ಷ ವ್ಯಕ್ತಪಡಿಸಿದರು.ಇಲಾಖೆಯಲ್ಲಿ ಇನ್ನು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ.  ಮುಂಬರುವ ದಿನಗಳಲ್ಲಿ ಇಲಾಖೆಯ ವ್ಯಾಪ್ತಿಯನ್ನು ಮತ್ತಷ್ಟು ಬಲಪಡಿಸಿ, ರಾಜ್ಯದ ಮೂಲಸೌಕರ್ಯ ವೃದ್ಧಿಗೆ ಇನ್ನಷ್ಟು ಉತ್ತಮ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬೆಳಗಾವಿಗೆ ಅನ್ಯಾಯವಾಗಿಲ್ಲ, ಮುಂದಿನ ಪಟ್ಟಿಯಲ್ಲಿ ಮತ್ತೊಂದು ಸಚಿವ ಸ್ಥಾನ ಖಚಿತ: ಸಚಿವ ಸ್ಥಾನ ಹಂಚಿಕೆಯಲ್ಲಿ ಬೆಳಗಾವಿ ಜಿಲ್ಲೆಗೆ ಅನ್ಯಾಯವಾಗಿಲ್ಲ. ಇನ್ನು ಎರಡನೇ ಪಟ್ಟಿ ಬಾಕಿ ಇದ್ದು, ಅದರಲ್ಲಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಗುವುದು ಖಚಿತ ಎಂದು ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.