ಭಗವತ್ ಗೀತೆಯ ಗ್ರಂಥ ವಿತರಿಸಿದ ಹಾಜಿ ಶಮಸುದ್ದಿನ ಕಾರ್ಯ ಅನುಕರಣೀಯ

ಭಗವತ್ ಗೀತೆಯ ಗ್ರಂಥ ವಿತರಿಸಿದ ಹಾಜಿ ಶಮಸುದ್ದಿನ ಕಾರ್ಯ ಅನುಕರಣೀಯ Haji Shamasuddi's exemplary work in distributing the Bhagavad Gita

ಅಥಣಿ 17: ಮುಸ್ಲಿಂ ಧರ್ಮದವರಾದರೂ ಕೂಡ ಗುಗವಾಡ ಗ್ರಾಮದ ಹಾಜಿ ಶಮಶುದ್ದಿನ ನಬಿಸಾಬ ಕಿರಣಗಿ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವತ್ ಗೀತೆಯ ಪ್ರತಿಗಳನ್ನು 101 ಭಕ್ತರಿಗೆ ಗುಗವಾಡ ಗ್ರಾಮದ ಹೊಳೆ ಹುಚ್ಚೇಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮ ವಿತರಿಸುವ ಮೂಲಕ ಸಾಮರಸ್ಯದ ಭಾವೈಕ್ಯತೆ ಭಾವವನ್ನು ಬಿತ್ತಿ ಎಲ್ಲರಿಗೂ ಮಾದರಿಯಾದರು. 

ಇತ್ತೀಚಿಗೆ ಜಾತಿ, ಜಾತಿಗಳ ಮಧ್ಯೆ ದ್ವೇಷ ಭಾವ ಅದರಲ್ಲೂ ಹಿಂದು, ಮುಸ್ಲಿಂರ ಮಧ್ಯೆಯಂತೂ ದಿನ ನಿತ್ಯ ದಂಗೆಗಳಾಗಿ ಭಾವೈಕ್ಯತೆಗೆ ಧಕ್ಕೆ ಬರುತ್ತಿರುವ ಇಂದಿನ ದಿನಗಳಲ್ಲಿ  ಮುಸ್ಲಿಂ ಧರ್ಮದ ಹಾಜಿ ಶಮಸುದ್ದಿನ ಕಿರಣಗಿ ಅಥಣಿ ಸಮೀಪದ ಗುಗವಾಡ ಗ್ರಾಮದ ಹೊಳೆ ಹುಚ್ಚೇಶ್ವರ ಮಠದ ಆವರಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ  ಭಗವತ್ ಗೀತೆಯ ಪ್ರತಿಗಳನ್ನು ವಿತರಿಸಿ ಮಾದರಿಯಾದರು. 

ಶ್ರೀಮಠದಿಂದ ಗೌರವ ಸತ್ಕಾರ ಮತ್ರು ಭಗವತ್ ಗೀತೆ ಗ್ರಂಥ ಸ್ವೀಕರಿಸಿ ಮಾತನಾಡಿದ ಜತ್ತ ಮತಕ್ಷೇತ್ರದ ಶಾಸಕ ಗೋಪಿಚಂದ ಪಡೋಲಕರ, ಇಡೀ ವಿಶ್ಚದಲ್ಲಿ ಭಾರತದ ಆಧ್ಯಾತ್ಮ ಮತ್ತು ಧಾರ್ಮಿಕ ಪರಂಪರೆ ಶ್ರೇಷ್ಠವಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಮ್ಮನ್ನು ಒಂದು ಗೂಡಿಸುತ್ತವೆ ಎಂದ ಅವರು ಶ್ರೀಮಠದ ಕಲ್ಯಾಣ ಮಂಟಪದ ನಿರ್ಮಾಣಕ್ಕಾಗಿ  ಮೊದಲ ಹಂತದಲ್ಲಿ 25 ಲಕ್ಷ ರೂಪಾಯಿ ಅನುದಾನ ಕೊಡುತ್ತೇನೆ ಎಂದರು. 

ಹಾಜಿ ಶಮಶುದ್ದಿನ  ಕಿರಣಗಿ 101 ಭಗವತ್ ಗೀತೆ ಗ್ರಂಥಗಳನ್ನು ವಿತರಿಸುವುದರ ಜೊತೆಗೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿರುವುದು ಕೂಡ ನಮಗೆಲ್ಲರಿಗೂ ಮಾದರಿ ಮತ್ತು ಅವರ ಕಾರ್ಯ ಎಲ್ಲರೂ ಮೆಚ್ಚುವಂತಹದ್ದಾಗಿದೆ ಎಂದರು. 

ಸಾಹಿತಿ ಡಾ.ವ್ಹಿ.ಎಸ್‌.ಮಾಳಿ ಮಾತನಾಡಿ, ಭಗವತ್ ಗೀತೆ ಒಂದು ಧರ್ಮದ ಗ್ರಂಥ ಅಲ್ಲ ಅದು ಜಗತ್ತಿನ ತತ್ವಜ್ಞಾನದ ಶ್ರೇಷ್ಠ ಕೋಷ ಭಗವತ್ ಗೀತೆ, ಉಪ ನಿಷತ್ ತತ್ವಗಳನ್ನು ಒಳಗೊಂಡ ಗ್ರಂಥವೇ ಭಗವತ್ ಗೀತೆ ಇಂತಹ ಭಗವತ್ ಗೀತೆಯ 100 ಗ್ರಂಥಗಳನ್ನು ಭಕ್ತರಿಗೆ ಹಂಚಿರುವುದು ಹಾಜಿ ಶಮಶುದ್ದಿನ ಕಿರಣಗಿಯವರ ಕಾರ್ಯ ನಮಗೆಲ್ಲ ಅನುಕರಣೀಯ ಎಂದರು. 

ಗುಗವಾಡ ಗ್ರಾಮ ಮಹಾರಾಷ್ಟ್ರ ದಲ್ಲಿದ್ದರೂ ಕೂಡ ಕನ್ನಡ ಭಾಷೆಯನ್ನೇ ಪ್ರಾಧಾನ್ಯತೆ ಮಾಡಿಕೊಂಡ ಗುಗವಾಡ ಗ್ರಾಮಸ್ಥರು ಹೊಳೆ ಹುಚ್ಚೇಶ್ವರ ಮಠದಲ್ಲಿ ನಿರಂತರವಾಗಿ ಒಂದು ತಿಂಗಳು ಶ್ರಾವಣ ಮಾಸದ ಅಂಗವಾಗಿ ಪ್ರವಚನದ ನೆಪದಲ್ಲಿ ಸೇರುವ ಮೂಲಕ 12 ನೇ ಶತಮಾನದ ಅನುಭವ ಮಂಟಪದ ನಿರ್ಮಾಣ ಮಾಡಿದ್ದಾರೆ ಎಂದರು. 

ಸಾನಿಧ್ಯ ವಹಿಸಿ ಮಾತನಾಡಿದ ಹೊಳೆ ಹುಚ್ಚೇಶ್ವರ ಮಠದ 13ನೇ ಹೊಳೆ ಹುಚ್ಚೇಶ್ವರ ಮಹಾಸ್ವಾಮೀಜಿ, ಜಾತಿ ಜಾತಿ, ಧರ್ಮ, ಧರ್ಮಗಳ ಮಧ್ಯೆ ಹೊಡೆದಾಡುತ್ತಿರುವ ಇಂದಿನ ವಿಷಮ ಸ್ಥಿತಿಯಲ್ಲಿ ಗೂಗವಾಡದಂತಹ ಸಣ್ಣ ಗ್ರಾಮದಲ್ಲಿ ಹಿಂದು-ಮುಸ್ಲಿಂರು ಒಂದಾಗಿ ಭಾವೈಕ್ಯರಾಗಿರುವುದು ಇಡೀ ದೇಶಕ್ಕೆ ಮಾದರಿ ಎಂದ ಅವರು ಹಾಜಿ ಶಮಶುದ್ದೀನ ಕಿರಣಗಿಯವರು ಬಗವತ್ ಗೀತೆಯ ಗ್ರಂಥಗಳನ್ನು ವಿತರಿಸುವ ಮೂಲಕ ಇಡೀ ದೇಶಕ್ಕೆ ಒಂದು ಹೊಸ ಸಂದೇಶ ನೀಡಿದೆ ಎಂದರು.          ರಾಯಗೊಂಡ ಅಂದಾನಿ, ಗಂಗಪ್ಪ ಕೊಂಕಣಿ, ಗುರುಶಾಂತ ಹಿರೇಮಠ, ಮಲ್ಲಪ್ಪ ಅಂದಾನಿ, ಮಹಾದೇವ ಜತ್ತಿ, ರಾಜು ಅಂದಾನಿ, ಸಿದ್ಧಪ್ಪಾ ಮದಭಾವಿ, ಬಸಗೊಂಡ ಚೌಗಲೆ, ರಾಮಗೊಂಡ ಸಮಗೊಂಡನವರ, ಚನ್ನಪ್ಪ ನಂದೇಶ್ವರ, ಸೋಹೇಲ್ ಕಿರಣಗಿ, ಯುಸೂಫ ಕಿರಣಗಿ, ಇಕ್ಬಾಲ್ ಕಿರಣಗಿ, ಫಾರೂಕ್ ಕಿರಣಗಿ, ಕಿರಣ ಗೆಜ್ಜಿ, ಅವಿನಾಶ ಪಾಟೀಲ, ರಸೂಲಸಾಬ ನದಾಫ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.