ಹಡಪದ ಅಪ್ಪಣ್ಣರ ಆದರ್ಶಗಳು ಇಂದಿಗೂ ಪ್ರಸ್ತುತ: ಶ್ರೀ ಬಸವ ಶಾಂತಲಿಂಗ ಮಹಾಸ್ವಾಮೀಜಿ

ಹಡಪದ ಅಪ್ಪಣ್ಣರ ಆದರ್ಶಗಳು ಇಂದಿಗೂ ಪ್ರಸ್ತುತ: ಶ್ರೀ ಬಸವ ಶಾಂತಲಿಂಗ ಮಹಾಸ್ವಾಮೀಜಿ  Hadapada Appanna's ideals remain relevant even today: Sri Basava Shantalinga Mahaswamiji

ಲೋಕದರ್ಶನ ವರದಿ  

ಹಾವೇರಿ 04 : ತಮ್ಮ ವೃತ್ತಿಯ ಜೊತೆಗೆ ಸಮಾಜದಲ್ಲಿದ್ದ ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳನ್ನು ಪ್ರಶ್ನಿಸುವ ಮೂಲಕ ಬಸವಣ್ಣನವರ ಆಶಯಗಳನ್ನು ಜನಮಾನಸಕ್ಕೆ ತಲುಪಿಸಿದ ಕೀರ್ತಿ ಶರಣ ಹಡಪದ ಅಪ್ಪಣ್ಣ ಅವರಿಗೆ ಸಲ್ಲುತ್ತದೆ ಎಂದು ಹೊಸಮಠದ ಶ್ರೀ ಬಸವ ಶಾಂತಲಿಂಗ ಮಹಾಸ್ವಾಮೀಜಿ ಹೇಳಿದರು.  

ನಗರದ ಶ್ರೀಮಠದಲ್ಲಿ ಬಸವ ಕೇಂದ್ರದ ವತಿಯಿಂದ ಆಯೋಜಿಸಿದ್ದ ಶರಣ ಸಂಗಮ ಹಾಗೂ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪ್ರತಿಯೊಂದು ಧರ್ಮದಲ್ಲಿಯೂ ಶೋಷಣೆ ಇದ್ದರೂ, ಅದನ್ನು ಪ್ರಶ್ನಿಸುವ ಧೈರ್ಯ ಅನುಭವ ಮಂಟಪದ ಮೂಲಕ ಬೆಳೆಸಲಾಯಿತು ಎಂದರು.

ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು. ತಮ್ಮ ಪತ್ನಿ ಶರಣೆ ಲಿಂಗಮ್ಮ ಅವರೊಂದಿಗೆ ಸುಖ-ದುಃಖಗಳಲ್ಲಿ ಸಮಭಾಗಿಯಾಗಿ ಬದುಕಿದ ಅವರು, ಎಷ್ಟೇ ಸಂಕಷ್ಟಗಳು ಎದುರಾದರೂ ಬಸವಣ್ಣನವರ ತತ್ವಗಳಿಗೆ ಬದ್ಧರಾಗಿದ್ದರು ಎಂದು ತಿಳಿಸಿದರು.  

ಶ್ರೀ ಹಡಪದ ಅಪ್ಪಣ್ಣ ಸೇವಾ ಸಂಘದ ಅಧ್ಯಕ್ಷ ಎಸ್‌.ಎನ್‌. ಕಾಯಕದ ಮಾತನಾಡಿ, ಸಮಾಜದಲ್ಲಿ ಶರಣ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಪ್ರತಿವರ್ಷ ಅಪ್ಪಣ್ಣರ ಜಯಂತಿಯನ್ನು ಆಚರಿಸಲಾಗುತ್ತಿದೆ. ಇದು ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.  

ಎಸ್‌.ಬಿ. ಕ್ಯಾಲಕೊಂಡ ಮಾತನಾಡಿ, ಬಸವಣ್ಣ ಮತ್ತು ಹಡಪದ ಅಪ್ಪಣ್ಣ ಅವರ ನಡುವಿನ ಆತ್ಮೀಯ ಸಂಬಂಧ ಹಾಗೂ ಅನುಭವ ಮಂಟಪದಲ್ಲಿ ಅಪ್ಪಣ್ಣರ ಪ್ರಮುಖ ಪಾತ್ರವನ್ನು ಸ್ಮರಿಸಿದರು.  ಅಹಿಂದ ಮುಖಂಡ ಉಡಚಪ್ಪ ಮಾಳಗಿ ಮಾತನಾಡಿ, ಬಸವಣ್ಣನವರ ತತ್ವಾದರ್ಶಗಳನ್ನು ಶ್ರೀಮಠ ಸದಾ ಬೆಂಬಲಿಸುತ್ತಿದ್ದು, ಸಮಾಜದಲ್ಲಿ ಅವುಗಳನ್ನು ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.  

ಈ ಸಂದರ್ಭದಲ್ಲಿ ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಬಾಪು ನಂದಿಹಳ್ಳಿ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ಮಹಾಲಿಂಗಪ್ಪ ಹಡಪದ, ಅಂಬರೀಶ್ ಭಗವಾನಪುರ, ಬಸವರಾಜ ಕಾಯಕದ, ಶಿವಯೋಗೆಪ್ಪ ದೇವಗಿರಿ, ವೀರೂಪಾಕ್ಷಪ್ಪ ಹಡಪದ, ಲಲಿತಾ ಹಳಕೊಪ್ಪ, ಗೊಳಪ್ಪ ಹಳಕೊಪ್ಪ, ರಕ್ಷಿತಾ ಮಡಿವಾಳರ, ಕವಿತಾ ಬಣಕಾರ, ಶಶಿಕಲಾ ಬೈಲಣ್ಣನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  ಮಮತಾ ಮಾಳಗಳ ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.