ಹಡಪದ ಅಪ್ಪಣ್ಣ ವಚನಗಳು ಸಾಮಾಜಿಕ ಕ್ರಾಂತಿಯ ಪ್ರತೀಕ: ಮಂಜುನಾಥ ಮಡಿವಾಳ

ಹಡಪದ ಅಪ್ಪಣ್ಣ ವಚನಗಳು ಸಾಮಾಜಿಕ ಕ್ರಾಂತಿಯ ಪ್ರತೀಕ: ಮಂಜುನಾಥ ಮಡಿವಾಳ  Hadapada Appanna's Vachanas are a symbol of social revolution: Manjunatha Madiwala

ಲೋಕದರ್ಶನ ವರದಿ

ಧಾರವಾಡ 06 : ನಿಜಸುಖ ಶರಣ ಹಡಪದ ಅಪ್ಪಣ್ಣ ಅವರು 12ನೇ ಶತಮಾನದ ವಚನ ಚಳವಳಿಯ ಪ್ರಮುಖ ಹರಿಕಾರರು ಹಾಗೂ ಸಾಮಾಜಿಕ ಕ್ರಾಂತಿಯ ಮುಂಚೂಣಿಗರಾಗಿದ್ದರು. ಅವರ ವಚನಗಳು ತತ್ವಜ್ಞಾನ, ವೈಚಾರಿಕತೆ ಮತ್ತು ಮಾನವೀಯ ಮೌಲ್ಯಗಳಿಂದ ಸಮೃದ್ಧವಾಗಿವೆ ಎಂದು ನೇಗಿನಹಾಳದ ಅನುಭಾವಿ ಮಂಜುನಾಥ ಮಡಿವಾಳ ಹೇಳಿದರು.  

ಕರ್ನಾಟಕ ವಿದ್ಯಾವರ್ಧಕ ಸಂಘ, ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಸ್ಮರಣಾರ್ಥ ದತ್ತಿ ಅಂಗವಾಗಿ ಆಯೋಜಿಸಿದ್ದ ‘ನಿಜಶರಣ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ದಂಪತಿಗಳ ಅನುಭಾವ ಸಾಹಿತ್ಯ’ ವಿಷಯ ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು.  

ಅನುಭಾವ ಸಾಹಿತ್ಯವು ಅಂತರಂಗದ ಶೋಧನೆ ಮತ್ತು ಆತ್ಮಸಾಕ್ಷಾತ್ಕಾರದ ಪ್ರತಿಬಿಂಬವಾಗಿದೆ. ಅದು ಸ್ವಾನುಭವದ ಮೂಲಕ ಸತ್ಯವನ್ನು ಗ್ರಹಿಸುವ ಆಧ್ಯಾತ್ಮಿಕ ಅನುಭವವಾಗಿದೆ. ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಬಗ್ಗೆ ಅಪಾರ ಗೌರವ ಮತ್ತು ಭಕ್ತಿ ಹೊಂದಿದ್ದರು. ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪದಲ್ಲಿ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಕಲ್ಯಾಣ ಕ್ರಾಂತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ವಚನಗಳಲ್ಲಿ ಕಾಯಕನಿಷ್ಠೆ, ವೈರಾಗ್ಯ, ಭಕ್ತಿ ಹಾಗೂ ವೈಚಾರಿಕತೆ ಸ್ಪಷ್ಟವಾಗಿ ವ್ಯಕ್ತವಾಗಿವೆ ಎಂದು ವಿವರಿಸಿದರು.  

ಹಡಪದ ಅಪ್ಪಣ್ಣ ಅವರು ಅಜ್ಞಾನಿಗಳನ್ನು ಸನ್ಮಾರ್ಗದತ್ತ ಕೊಂಡೊಯ್ಯುವ, ಶೋಷಿತರು, ನೊಂದವರು, ಬಡವರು ಹಾಗೂ ದಮನಿತರ ಪರವಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದ ಮಹಾನ್ ಶರಣರಾಗಿದ್ದರು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯವನ್ನು ಅವರು ಕೈಗೊಂಡಿದ್ದರು. ಲಿಂಗಮ್ಮ ಅವರೂ ವಚನಗಾರ್ತಿಯಾಗಿ ಶಿವಯೋಗ ಸಾಧಕಿಯಾಗಿದ್ದರು. ಅವರ ಪ್ರಸಿದ್ಧ ವಚನವಾದ ‘ಕನಿಷ್ಠರಲ್ಲಿ ಹುಟ್ಟಿದೆ, ಉತ್ತಮರಲ್ಲಿ ಬೆಳೆದೆ’ ಎಂಬುದು ಅವರ ಜೀವನದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಈ ದಂಪತಿ ತಮ್ಮ ವಚನಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ತಾಲೂಕು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಲಿಂಗರಾಜ ಕಲ್ಲೂರು ಮಾತನಾಡಿ, ಬಸವಣ್ಣ ಹಾಗೂ ಅಪ್ಪಣ್ಣ ಅವರ ದೇಹಗಳು ಬೇರೆಬೇರೆಯಾಗಿದ್ದರೂ ಅವರ ಆತ್ಮ ಮತ್ತು ಆದರ್ಶಗಳು ಒಂದೇ ಆಗಿದ್ದವು ಎಂದು ಹೇಳಿದರು.  

ವೇದಿಕೆಯಲ್ಲಿ ಹಡಪದ ಸಮಾಜದ ಮುಖಂಡ ಮಲ್ಲಿಕಾರ್ಜುನ ಹಡಪದ ಉಪಸ್ಥಿತರಿದ್ದರು. ಸತೀಶ ತುರಮರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡಿನ ಕಾರ್ಯಕ್ರಮ ನಿರೂಪಿಸಿ ಪರಿಚಯಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.  

ಕಾರ್ಯಕ್ರಮದಲ್ಲಿ ಡಾ. ಬಾಳಪ್ಪ ಚಿನಗುಡಿ, ರವಿರಾಜ ಹಡಪದ, ಸುರೇಶ್ ಹಿರೇಮಠ, ವೀರಣ್ಣ ಚಿಕ್ಕಬೆಳ್ಳಿಗಟ್ಟಿ, ಪುಂಡಲೀಕ ಹಡಪದ, ಬಸವರಾಜ ನರಜಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಭಾಗವಹಿಸಿದ್ದರು.