ಹಡಪದ ಅಪ್ಪಣ್ಣ, ಲಿಂಗಮ್ಮರ ಸ್ಮರಣಾರ್ಥ ದತ್ತಿ ಕಾರ್ಯಕ್ರಮ
Hadapa Appanna, Lingamma's Memorial Endowment Program
ಹಡಪದ ಅಪ್ಪಣ್ಣ, ಲಿಂಗಮ್ಮರ ಸ್ಮರಣಾರ್ಥ ದತ್ತಿ ಕಾರ್ಯಕ್ರಮ
ಧಾರವಾಡ, 05 ; 12ನೇ ಶತಮಾನದಲ್ಲಿ ವೈಚಾರಿಕ ನೆಲೆಗಟ್ಟಿನ ಮೇಲೆ ಸಮಸಮಾಜ ನಿರ್ಮಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಬಸವತತ್ವ ಪ್ರಸಾರಕರಾದ ಪೂಜ್ಯ ಬಸವದೇವರು ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ನಿಜಸುಖಿ ಶರಣರಾದ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮರ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ‘ನಿಜ ಶರಣ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ದಂಪತಿಗಳ ಜೀವನ ದರ್ಶನ’ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
12ನೇ ಶತಮಾನ ವೈಚಾರಿಕಯುಗ. ಸಮಾನತೆ ಹಾಗೂ ಸೌಹಾರ್ದತೆಯನ್ನು ತಂದು ಕೊಟ್ಟ ಯುಗ. ಈ ಕಾಲಘಟ್ಟದ ಮಹಾನ್ ಶರಣರಲ್ಲಿ ಹಡಪದ ಅಪ್ಪಣ್ಣ ಹಾಗೂ ಲಿಂಗಮ್ಮ ದಂಪತಿಗಳು ಒಬ್ಬರು. ಹಡಪದ ಅಪ್ಪಣ್ಣನವರು ಬಸವಣ್ಣನವರ ಬಾಲ್ಯದ ಒಡನಾಡಿಯಾಗಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸಿದರು. ಕಾಯಕಯೋಗಿಗಳಾದ ಅವರು ತಮ್ಮ ವೃತ್ತಿಯೊಂದಿಗೆ 250 ವಚನಗಳನ್ನು ರಚಿಸಿದ್ದಲ್ಲದೇ ಶರಣೆ ಲಿಂಗಮ್ಮನವರು 115 ವಚನಗಳನ್ನು ರಚಿಸಿದರು. ಶರಣರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗಬಾರದು. ಅವರು ಜಾತಿ ಮತ್ತು ವರ್ಗವನ್ನು ಮೀರಿ ಬೆಳೆದವರು. ನಾವು ಶರಣರ ನಿಜ ಸಂತಾನದವರಾಗಬೇಕು ಹೊರತು ಅಂತರಂಗದ ದ್ರೋಹಿಗಳಾಗಿರಬಾರದು ಎಂದರು.
ಈರ್ವ ಶರಣ ದಂಪತಿಗಳು ರಚಿಸಿದ ವಚನಗಳು ಅಲ್ಲಮ ಪ್ರಭುವಿನಂತೆ ಬೆಡಗಿನ ವಚನಗಳಾಗಿದ್ದು, ಶೋಷಣೆ ಮಾಡುವ ವರ್ಗಕ್ಕೆ ಚಾಟಿ ಬೀಸುವಂತಿವೆ. ಈ ಬೆಡಗಿನ ವಚನಗಳ ಅಜ್ಞಾನಿಗಳಿಗೆ ಸನ್ಮಾರ್ಗ ತೋರಿ, ಆದರ್ಶ ಸಮಾಜ ಕಟ್ಟುವಲ್ಲಿ ಸಹಕಾರಿಯಾಗಿವೆ. ಅಪ್ಪಣ್ಣನವರು ಲೌಕಿಕ ಹಾಗೂ ಪಾರಮಾರ್ಥಿಕ ಎರಡನ್ನೂ ತೂಗಿಸಿಕೊಂಡು ಹೋಗಿ ‘ನಿಜಸುಖಿ’ ಎನಿಸಿಕೊಂಡರು ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಕಪ್ಪತಗುಡ್ಡದ ನಂದಿವೇರಿ ಮಠದ ಪೂಜ್ಯ ಮ.ನಿ.ಪ್ರ. ಶಿವಕುಮಾರ ಸ್ವಾಮಿಗಳು ಆಶೀರ್ವಚನ ನೀಡಿ, ಕ.ವಿ.ವ. ಸಂಘವು ಒಂದು ರೀತಿ ಆಧುನಿಕತೆಯ ಅನುಭವ ಮಂಟಪದಂತಿದೆ. ಫ.ಗು. ಹಳಕಟ್ಟಿ ಅವರ ಪರಿಶ್ರಮದಿಂದ ವಚನ ಸಾಹಿತ್ಯ ಶ್ರೀಮಂತವಾಯಿತು. ಇಂದು ನಾವು ಸುಳ್ಳು ಸುಖದ ಬೆನ್ನು ಹತ್ತದೇ ನಿಜಸುಖಗಳಾಗಬೇಕು. ಅಲಕ್ಷಿತ ಶರಣ ಸಂಕುಲದ ವಚನಗಳನ್ನು ಎಲ್ಲರೂ ಓದುವಂತಾಗಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿದರು.
ಉಭಯ ಶ್ರೀಗಳನ್ನು ಧಾರವಾಡದ ಹಡಪದ ಸಮಾಜದ ಬಂಧುಗಳು ಸನ್ಮಾನಿಸಿ ಗೌರವಿಸಿದರು. ಶಂಕರ ಕುಂಬಿ ವೇದಿಕೆಯಲ್ಲಿದ್ದರು.
ಸತೀಶ ತುರಮರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಾಳಪ್ಪಾ ಚಿನಗುಡಿ ಶ್ರೀಗಳನ್ನು ಪರಿಚಯಿಸಿದರು. ಪ್ರೊ. ಶಶಿಧರ ತೋಡಕರ ನಿರೂಪಿಸಿದರು. ಪ್ರೊ. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಶ್ರೀ ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ, ಮಲ್ಲಿಕಾರ್ಜುನ ಹಡಪದ, ರವಿರಾಜ ಹಡಪದ, ಕೆ.ಎಸ್. ಕೋರಿಶೆಟ್ಟರ, ಯು.ಎಸ್. ಕುನ್ನಿಭಾವಿ, ಹೊಸಮನಿ ಸೇರಿದಂತೆ ಹಡಪದ ಸಮಾಜದ ಬಂಧುಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 