ಹಾವೇರಿ 11 : ತಮ್ಮ ಬೋಧನೆ ಹಾಗೂ ಜೀವನದಿಂದ ವಿದ್ಯಾರ್ಥಿಗಳನ್ನು ತಿದ್ದಿ,ತೀಡಿ ಅವರನ್ನು ಕಲಾತ್ಮಕ ಕೌಶಲ್ಯ ಎಂಬಂತೆ ರೂಪಿಸಿ ಮನುಷ್ಯರನ್ನಾಗಿ ಮಾಡಿದ, ಮಾಡುತ್ತಿರುವ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಶಿಕ್ಷಕ ವೃತ್ತಿಯ ಸಾರ್ಥಕತೆ ಅಡಗಿದೆ ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.
ಶುಕ್ರವಾರ ತಾಲೂಕಿನ ದೇವಗಿರಿ ಗ್ರಾಮದ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸಭಾಭವನದಲ್ಲಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ 1994-95ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ಸಂಘಟಿಸಿದ್ದ ಗುರುವಂದನೆ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಅರ್ಜಿ ಸಲ್ಲಿಸಿ ಪಡೆಯುವ ಯಾವುದೇ ಪ್ರಶಸ್ತಿಗಿಂತ ವಿದ್ಯಾರ್ಥಿಗಳು ನೀಡಿದ ಗೌರವ ವಂದನೆ ಹೆಚ್ಚಿನದು, ಶಿಕ್ಷಕರು ತಮ್ಮಲ್ಲಿರುವ ಪ್ರತಿಭೆಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವ ಸಂಸ್ಕೃತಿಕ ವರ್ಗಾವಣೆಯ ನೇತಾರರು. ಶಿಕ್ಷಕರ ಒಂದೊಂದು ಮಾತು, ಕೃತಿ ಮಗುವನ್ನು ಪ್ರೋತ್ಸಾಹಿಸಬಲ್ಲವೂ ಅಂತೆಯೇ ಕುಗ್ಗಿಸಿ ಬಿಡಬಲ್ಲವು. ಜೀವನದಲ್ಲಿ ಬದಲಾವಣೆ ತರಬಲ್ಲ ಮಾತುಗಳು ಮನದಾಳದ ಚಿಂತನೆಯಿಂದ ಬಂದರೆ ವಿದ್ಯಾರ್ಥಿಗಳ ಬಾಳು ನಂದನ ವಾಗನವಾಗಬಲ್ಲದು. ಸ್ವಲ್ಪ ಕರುಣೆಯಿಂದ, ಪ್ರೀತಿಯಿಂದ ಮಗುವನ್ನು ಗಮನಿಸಿದರೆ ಅಸಾಧ್ಯ ಬದಲಾವಣೆ ಸಾಧ್ಯ ಎಂದರು. ಶಿಷ್ಯಂದಿರು ಗುರಿ ಸಾಧನೆ ಮಾಡಿರುವುದನ್ನು ಕಂಡಾಗ ಸಂತೃಪ್ತಿ ಉಂಟಾಗುತ್ತದೆ. ಒಳ್ಳೆಯ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳು ಅಂಜಿಕೆ ಭಾವನೆಯನ್ನು ಇರಿಸಿಕೊಂಡಿರುತ್ತಾರೆ, ಹಾಗೆ ಗೌರವದ ಭಾವನೆಯನ್ನು ಇರಿಸಿಕೊಂಡಿರುತ್ತಾರೆ. ಶಿಕ್ಷಕ ತನ್ನ ಶಿಷ್ಯನ ಮೇಲೆ ಅವನ ಜೀವನ ಪರ್ಯಂತ ಪ್ರಭಾವ ಬೀರುತ್ತಾನೆ. ಗುರುವಿನ ಪ್ರಭಾವ ಅನಂತದವರೆಗೆ ಪರಿಣಾಮ ಬೀರುತ್ತದೆ ಎಂದು ಹನುಮಂತಗೌಡ ಗೊಲ್ಲರ ತಿಳಿಸಿದರು.
ಎಸ್ಎಂಎಸ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಎಸ್.ವಿ. ಮಾಹೂರ ಮಾತನಾಡಿ ಇದೊಂದು ಐಸ್ಮರಣೀಯ ಕಾರ್ಯಕ್ರಮ, ಕಲಿಸಿದ ಗುರುಗಳು ಕಲಿತ ಶಾಲೆ ಎಂದು ಮರೆಯಬಾರದು ಎಂದರು. ನಿವೃತ್ತ ಮುಖ್ಯೋಪಾಧ್ಯಾಪಕ ಎಸ್.ಜಿ.ಸಿದ್ದಮ್ಮನವರ್ ಕಾರ್ಯಕ್ರಮ ಉದ್ಘಾಟಿಸಿದರು, ಸುಧಾ ಕುಲಕರ್ಣಿ, ಡಿ.ಎಸ್.ಪರಡ್ಡಿ, ಬಿ.ಎಚ್. ಬಾರ್ಕಿ, ಸಾವಿತ್ರಮ್ಮ ಬಡ್ನಿ, ಬಿ.ಎಸ್. ಮುಗದೂರ, ಪಿ.ಎಸ್. ತಿರುಕಣ್ಣನವರ ಅವರನ್ನು ಹಿರಿಯ ವಿದ್ಯಾರ್ಥಿಗಳು ಗೌರವಿಸಿ ಗುರುವಂದನೆ ಅರ್ಥಪೂರ್ಣವಾಗಿಸಿದರು.
ಇದೇ ಸಂದರ್ಭದಲ್ಲಿ ವಿಜಯಕುಮಾರ್ ಬೋಳಶೆಟ್ಟಿ ಅವರಿಗೆ "ಕಲಾ ರತ್ನ" ಪ್ರಶಸ್ತಿ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು. ಪಿ.ಬಿ. ಮುದ್ದಿ ಗುರುವಂದನೆಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿ ಗುರು ಶಿಷ್ಯರ ಸಮಾಗಮ ಮೆಲಕು ಹಾಕುವ ಸಮಯವಿದು, ವಿದ್ಯಾರ್ಥಿಗಳಿಗೆ ನಮ್ಮ ನಿಜವಾದ ಮೌಲ್ಯಮಾಪಕರು ಎಂದರು. ಹಿರಿಯ ವಿದ್ಯಾರ್ಥಿಗಳ ಪರವಾಗಿ ಮಾರುತಿ ಗೊರವಾರ ಕಟ್ಟಡ ನಿರ್ಮಾಣಕ್ಕೆ ಒಂದು ಲಕ್ಷ ರೂ ನೀಡುವುದಾಗಿ ಘೋಷಿಸಿದರು. ಸಂಗಮೇಶ ಹೊರಡಿ, ಚೆನ್ನಮ್ಮ ಗುರುಮಠ, ಅನಿಸಿಕೆಗಳನ್ನು ಹಂಚಿಕೊಂಡರು. ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಪಾಟೀಲ್ ಅಧ್ಯಕ್ಷತೆ ವಹಿಸಿ ಧನದ ಸಾರ್ಥಕತೆ ದಾನದಲ್ಲಿದೆ, ಅನೇಕ ದಾನಿಗಳ ಕೊಡುಗೆ ಅಪಾರವಾಗಿದೆ, ಗ್ರಾಮದ ಸುಧಾರಣೆ ಶಾಲೆಗಳನ್ನು ಅವಲಂಬಿಸಿದೆ ಎಂದರು. ಅಶೋಕ ಕಲ್ಲೇದೇವರ, ಗಂಗಾಧರ್ ಪಾಟೀಲ್, ಬಸವರಾಜ್ ಮೈದೂರ, ಮಲ್ಲಿಕಾರ್ಜುನ ಮತ್ತಿತರರು ವೇದಿಕೆಯಲ್ಲಿದ್ದರು. ನಂದ ಪಾಟೀಲ್ ಪ್ರಾರ್ಥಿಸಿದರು. ಜಯಮ್ಮ, ರಾಜೇಶ್ವರಿ, ಮಾಲತಿ, ಗೌರಮ್ಮ, ಸರೋಜಾ, ಹೊನ್ನಮ್ಮ ಗೀತ ಗಾಯನ ಮಾಡಿದರು. ಶ್ರೀಧರ್ ಗೌಡಪ್ಪನವರ ಸ್ವಾಗತಿಸಿದರು. ಮಂಜುನಾಥ್ ಕಾರರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೇತ್ರಾವತಿ ಚನ್ನವೀರ್ಪನವರ್ ನಿರೂಪಿಸಿದರು. ಪರಡ್ಡಿ ವಂದಿಸಿದರು.