ಮುಂದಿನ ಜಾತ್ರೆಯೊಳಗೆ ಕರಾಡದೊಡ್ಡಿಯಲಿ ಬಾಳುಮಾಮಾ ಅವರ ಭವ್ಯ ಗುಡಿ ನಿರ್ಮಾಣ: ಎಂ.ಬಿ. ಪಾಟೀಲ

ಮುಂದಿನ ಜಾತ್ರೆಯೊಳಗೆ ಕರಾಡದೊಡ್ಡಿಯಲಿ ಬಾಳುಮಾಮಾ ಅವರ ಭವ್ಯ ಗುಡಿ ನಿರ್ಮಾಣ: ಎಂ.ಬಿ. ಪಾಟೀಲ  Grand temple of Balu Mama to be built at Karadadoddi by the next fair: M.B. Patil


ಕರಾಡದೊಡ್ಡಿ 30: ಮುಂದಿನ ಜಾತ್ರೆಯೊಳಗೆ ಕರಾಡದೊಡ್ಡಿಯಲ್ಲಿ ಸಂತ ಬಾಳುಮಾಮಾ ಅವರ ಭವ್ಯ ಗುಡಿ ನಿರ್ಮಾಣವಾಗಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು. ಭಾನುವಾರ ಕರಾಡದೊಡ್ಡಿಯಲ್ಲಿ ನಡೆಯುತ್ತಿದ್ದ ಬಾಳುಮಾಮಾ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಸಂತ ಬಾಳುಮಾಮಾ ಅವರ ಆಶೀರ್ವಾದ ಪಡೆದು ಅವರು ಮಾತನಾಡಿದರು. ಸಂತ ಬಾಳುಮಾಮಾ ಅವರು ಶ್ರೇಷ್ಠ ಸಂತರಾಗಿದ್ದು, ಅವರ ಸರಳ ಜೀವನ, ಆದರ್ಶಗಳು ಹಾಗೂ ಸಮಾಜಕ್ಕೆ ನೀಡಿದ ಸಂದೇಶಗಳು ಎಲ್ಲರಿಗೂ ಮಾದರಿಯಾಗಿವೆ.

ಮುಂದಿನ ಜಾತ್ರೆಗೆ ತಾವು ಇಲ್ಲಿಗೆ ಬರುವಷ್ಟರಲ್ಲಿ ಭವ್ಯ ಗುಡಿ ನಿರ್ಮಾಣವಾಗಿರುತ್ತದೆ ಎಂದು ಭರವಸೆ ನೀಡಿದರು. ತಾಂಡಾದಲ್ಲಿ ಸಿಎಸ್‌ಆರ್ ಅನುದಾನದಡಿ ಎರಡು ಶಾಲಾ ಕೊಠಡಿಗಳನ್ನು ನಿರ್ಮಿಸುವುದರ ಜೊತೆಗೆ ಮಕ್ಕಳಿಗೆ ಆಟಿಕೆ ಹಾಗೂ ಅಗತ್ಯ ಆಟದ ಸಲಕರಣೆಗಳನ್ನು ಒದಗಿಸಲಾಗುವುದು. ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಸರ್ಕಾರಿ ನೋಟಿಫಿಕೇಷನ್ ಪ್ರಕ್ರಿಯೆ ಪೂರ್ಣಗೊಂಡ ನಂತರ ತಾಂಡಾ ನಿವಾಸಿಗಳಿಗೆ ಭೂಮಿ ಹಸ್ತಾಂತರಿಸಲಾಗುವುದು.

ಮಾನವರದೊಡ್ಡಿಯಲ್ಲಿ ಹೊಸ ಶಾಲೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಬಾಳುಮಾಮಾ ಅವರಿಗೆ ಕುರಿಗಳೆಂದರೆ ಅಪಾರ ಪ್ರೀತಿ. ಕುರಿ ಸಾಕಾಣಿಕೆದಾರರು ಕುರಿ ಸಾಕಾಣಿಕೆಯ ಜೊತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಸುರೇಶ ಭಂಡಾರಿ, ಶಿವಾನಂದ ದಳವಾಯಿ, ಸಚಿನ ಲೋಖಂಡೆ, ರಂಗಾ ಬರಕಾರಿ, ಶ್ರೀಶೈಲ ದಳವಾಯಿ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.