ಬಸವಣ್ಣನವರ ಮೂರ್ತಿಯ ಭವ್ಯ ಮೆರವಣಿಗೆ: ವಿಜೃಂಭಣೆಯಿಂದ ವೃಕ್ಷೊತ್ಸವ

ಬಸವಣ್ಣನವರ ಮೂರ್ತಿಯ ಭವ್ಯ ಮೆರವಣಿಗೆ: ವಿಜೃಂಭಣೆಯಿಂದ ವೃಕ್ಷೊತ್ಸವ  Grand procession of Basavanna's idol: Tree Festival celebrated with pomp and show

ಲೋಕದರ್ಶನ ವರದಿ 

ಜಮಖಂಡಿ 22: ಬಸವ ಜಯಂತಿ ನಿಮಿತ್ತ ನಗರದ ಐತಿಹಾಸಿಕ ಓಲೆಮಠದ ಆಶ್ರಯದಲ್ಲಿ ಬಸವಣ್ಣನವರ ಮೂರ್ತಿಯ ಭವ್ಯ ಮೆರವಣಿಗೆ ಶ್ರದ್ಧಾಭಕ್ತಿ ಹಾಗೂ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಸಂದೇಶ ಸಾರುವ ವೃಕ್ಷೊತ್ಸವ ವಿಜೃಂಭಣೆಯಿಂದ ಜರುಗಿತು. ನಗರದ ಬಸವೇಶ್ವರ ವೃತ್ತದ ಅಶ್ವಾರೂಢ ಬಸವಣ್ಣನವರ ಪುತ್ಥಳಿಗೆ ಓಲೇಮಠದ ಆನಂದ ದೇವರು ಮಾಲಾರೆ​‍್ಣ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕರಡಿಮೇಳ ವಾದ್ಯ ಮೆರವಣಿಗೆಗೆ ಒಳ್ಳೆಯ ಕಳೆ ತಂದಿತ್ತು. ಕಂಕಣವಾಡಿಯ ಗೊಂಬೆ ಕುಣಿತ ಸಾರ್ವಜನಿಕರ ಗಮನ ಸೆಳೆಯಿತು. ಧರ್ಮದ ಚಿಹ್ನೆವುಳ್ಳ ಕೊರಳವಸ್ತ್ರ, ಬಸವಣ್ಣನವರ ಭಾವಚಿತ್ರವುಳ್ಳ ಬ್ಯಾಡ್ಜ್‌ ಧರಿಸಿದ ಬಸವಾಭಿಮಾನಿಗಳು ಷಟಸ್ಥಲಧ್ವಜ ಹಾಗೂ ಬಸವಧ್ವಜ ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿದ್ದರು.  

ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಸಂದೇಶ ಸಾರಲು ತಲೆಯ ಮೇಲೆ ಸಸಿ ಹೊತ್ತ ಮಹಿಳೆಯರು ‘ಓಂ ಶ್ರೀಗುರು ಬಸವಲಿಂಗಾಯ ನಮಃ’ ಜಯಘೋಷ ಕೂಗಿದರು. ವಿಶ್ವಗುರು ಬಸವಣ್ಣ, ಶರಣ ಹರಳಯ್ಯ, ಶಿವಯೋಗಿ ಸಿದ್ದರಾಮೇಶ್ವರ, ಓಂ ಶಿವಶಕ್ತಿ ಗಣಪದಂ, ಕುಂಬಾರ ಗುಂಡಯ್ಯ, ಡೋಹರ ಕಕ್ಕಯ್ಯ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ದೇವರ ದಾಸಿಮಯ, ಶೂನ್ಯ ಪೀಠಾಧೀಶ ಅಲ್ಲಮಪ್ರಭು ದೇವರು, ನುಲಿಯ ಚಂದಯ್ಯ, ಅವಿರಳಜ್ಞಾನಿ ಚೆನ್ನಬಸವಣ್ಣ ಸೇರಿದಂತೆ ಬಸವಾದಿ ಶಿವಶರಣರ, ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮನವರ ಭಾವಚಿತ್ರಗಳನ್ನು ಕಟ್ಟಿಕೊಂಡು ಆಟೋರಿಕ್ಷಾಗಳು ಸಾಲಾಗಿ ಹೊರಟಿದ್ದವು. 

ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಸಾಗಿಬಂದು ಓಲೆಮಠ ತಲುಪಿತು. ಓಲೆಮಠದ ಆನಂದ ದೇವರು ಶ್ರೀಗಳು ಮೆರವಣಿಗೆಯ ನೇತೃತ್ವ ವಹಿಸಿದ್ದರು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಹುಲ್ಯಾಳದ ದುಂಡಯ್ಯ ಸ್ವಾಮಿಗಳು ಮೆರವಣಿಗೆಯಲ್ಲಿ ಸಾಗಿದ್ದರು. ಮಾಜಿ ಶಾಸಕ ಆನಂದ ನ್ಯಾಮಗೌಡ, ಬಸವ ಕೇಂದ್ರದ ಅಧ್ಯಕ್ಷ ರವಿ ಯಡಹಳ್ಳಿ, ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ, ಗುತ್ತಿಗೆದಾರ ಎ.ಆರ್‌. ಶಿಂಧೆ, ವಕೀಲ ಸಿ.ಎಸ್‌. ಬಾಂಗಿ, ರಾಜೇಸಾಬ ಕಡಕೋಳ, ಬಸವರಾಜ ಬಳಗಾರ, ಪ್ರಭು ಜನವಾಡ, ಬಿ.ಎಸ್‌. ಸಿಂಧೂರ, ಲಿಂಗರಾಜ ಪಾಟೀಲ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.