ಮಹಾಲಿಂಗಪುರದಲ್ಲಿ ಭವ್ಯ ರೊಟ್ಟಿ ಜಾತ್ರೆ

ಮಹಾಲಿಂಗಪುರದಲ್ಲಿ ಭವ್ಯ ರೊಟ್ಟಿ ಜಾತ್ರೆ  Grand Rotti Fair in Mahalingapura

ಲೋಕದರ್ಶನ ವರದಿ 

  ಮಹಾಲಿಂಗಪುರ 23: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಗುರು ಮಹಾಲಿಂಗೇಶ್ವರ ಜಾತ್ರೆಯ ಅಂಗವಾಗಿ ಭಕ್ತಿ, ಸಂಪ್ರದಾಯ ಹಾಗೂ ಸೌಹಾರ್ದತೆಯ ಪ್ರತೀಕವಾದ ಭವ್ಯ ರೊಟ್ಟಿ ಜಾತ್ರೆ ಭಕ್ತಿಭಾವದಿಂದ ನಡೆಯಿತು. ಪಟ್ಟಣದ ವಿವಿಧ ಬಡಾವಣೆಗಳ ಸಾವಿರಾರು ಮಹಿಳೆಯರು ತಮ್ಮ ಮನೆಗಳಲ್ಲಿಯೇ ಶ್ರದ್ಧೆ ಮತ್ತು ಪರಿಶ್ರಮದಿಂದ ರೊಟ್ಟಿಗಳನ್ನು ಸಿದ್ಧಪಡಿಸಿ, ಗುರು ಮಹಾಲಿಂಗೇಶ್ವರನಿಗೆ ಸಮರ​‍್ಿಸುವ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡರು.

ಮಹಿಳೆಯರ ಕೈಯಲ್ಲಿ ಸಿದ್ಧವಾದ ಸಾವಿರಾರು ರೊಟ್ಟಿಗಳು ಭಕ್ತಿಯ ಸಂಕೇತವಾಗಿ ಗಮನ ಸೆಳೆದವು. ರೊಟ್ಟಿ ಜಾತ್ರೆಯ ಮೆರವಣಿಗೆಯಲ್ಲಿ ಡೋಲು, ಗೊಂಬೆ ಕುಣಿತ, ಕರಡಿ ಮಜಲು ಸೇರಿದಂತೆ ವಿವಿಧ ಜನಪದ ಕಲಾ ತಂಡಗಳ ಪ್ರದರ್ಶನ ಜನರನ್ನು ಆಕರ್ಷಿಸಿತು. ಮಹಿಳೆಯರು, ಯುವಕರು ಹಾಗೂ ಹಿರಿಯರು ಸೇರಿದಂತೆ ಎಲ್ಲ ವರ್ಗದ ಜನರು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.  

ಮನೆಯ ಅಡುಗೆ ಮನೆಯಲ್ಲಿ ಸಿದ್ಧವಾದ ರೊಟ್ಟಿಗಳು ದೇವರ ಸನ್ನಿಧಿಗೆ ತಲುಪಿದ ಕ್ಷಣ ಭಕ್ತಿಯ ಹಬ್ಬವಾಗಿ ಪರಿವರ್ತನೆಯಾಯಿತು. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದಲ್ಲಿ ‘ನಮ್ಮ ದೇವರಿಗೆ ನಮ್ಮ ಕೈಯಿಂದ ತಯಾರಿಸಿದ ಅಡುಗೆಯನ್ನು ಅರ​‍್ಿಸಬೇಕು’ ಎಂಬ ಭಕ್ತಿಭಾವ ವ್ಯಕ್ತವಾಯಿತು. ಮೆರವಣಿಗೆ ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನದ ಆವರಣ ತಲುಪಿದ ಬಳಿಕ ರೊಟ್ಟಿಗಳನ್ನು ದೇವರಿಗೆ ಸಮರ​‍್ಿಸಲಾಯಿತು. ಬಳಿಕ ಮಠದ ವತಿಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದ ಭಕ್ತರು ಹಾಗೂ ರೊಟ್ಟಿ ತಯಾರಿಸಿದ ತಾಯಂದಿರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಯಿತು.  

ಸೆ. 24ರಂದು ಬಸವೇಶ್ವರ ವೃತ್ತದಿಂದ ಪಟ್ಟಣದ ದಕ್ಷಿಣ ಹಾಗೂ ಪೂರ್ವ ಭಾಗ ಸೇರಿದಂತೆ ವಿವಿಧ ಪ್ರದೇಶಗಳಿಂದ ರೊಟ್ಟಿ ಮೆರವಣಿಗೆ ನಡೆಯಲಿದೆ ಎಂದು ತಿಳಿಸಲಾಗಿದೆ. ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಬಡಾವಣೆಗಳ ಹಿರಿಯರು, ವಿವಿಧ ಸಮಾಜಗಳ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಯುವಕರು ಹಾಗೂ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರ ಪರಿಶ್ರಮದಿಂದ ಸಿದ್ಧವಾದ ರೊಟ್ಟಿ, ಭಕ್ತಿಭಾವದಿಂದ ಸಾಗಿದ ಮೆರವಣಿಗೆ ಹಾಗೂ ಜನಪದ ಕಲಾ ಪ್ರದರ್ಶನಗಳು ಮಹಾಲಿಂಗಪುರದ ಜಾತ್ರೆಯ ವೈಭವಕ್ಕೆ ಮತ್ತಷ್ಟು ಮೆರುಗು ತಂದವು.