ಕೊಪ್ಪಳ 07: ಸರಕಾರಿ ನೌಕರರು ಸರ್ಕಾರದ ನಿಜವಾದ ಕಸ್ಟೋಡಿಯನಗಳಾಗಿದ್ದು ತಾವು ಪರಿಣಾಮಕಾರಿಯಾಗಿ ಕೆಲಸ ಮಾಡಿದಾಗ ಮಾತ್ರ ಸಮಾಜದ ಅಭಿವೃದ್ಧಿಯ ಜೊತೆಗೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಹೇಳಿದರು.
ಅವರು ಬುಧವಾರ ಕೊಪ್ಪಳ ಜಿಲ್ಲಾಡಳಿತ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶ ಹಾಗೂ ಜನರ ಸುಧಾರಣೆಗಾಗಿ ಜನಪ್ರತಿನಿಧಿಗಳು ಹಾಗೂ ಸರಕಾರಿ ನೌಕರರು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕಿದೆ. ಜನ ಸೇವೆ ದೇವರ ಸೇವೆ ಇದ್ದಂತೆ. ನಮ್ಮ ದೇಶಗಳಲ್ಲಿ ಬಹಳಷ್ಟು ಜನಸಂಖ್ಯೆ ಜೊತೆಗೆ ಬಡತನವು ಇರುವುದರಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಬೇಕಿದೆ. ಆಡಳಿತದಲ್ಲಿ ಪ್ರಾಮಾಣಿಕತೆಯು ಬರಬೇಕಿದೆ ಎಂದರು.ಗ್ರಾಮೀಣ ಪ್ರದೇಶಗಳಲ್ಲಿ ಹಿಂದುಳಿದ ಮಕ್ಕಳಿಗೆ ಶಿಕ್ಷಕರು ಪರೀಣಾಮಕಾರಿಯಾಗಿ ಕಲಿಸಬೇಕು. ಶಿಕ್ಷಕರಿಗೆ ಸಮಸ್ಯೆಯಾಗದಂತೆ ಅವರ ವರ್ಗಾವಣೆ ಪ್ರಕ್ರಿಯೆಗೆ ಕೌನ್ಸಿಲಿಂಗ ತರಲಾಗಿದೆ. ಅಬಕಾರಿ. ಸಬ್ ರಿಜಿಸ್ಟ್ರಾರ್. ಗಣಿ ಮತ್ತು ಭೂ ವಿಜ್ಞಾನ ಸೇರಿದಂತೆ ಇತರೆ ಇಲಾಖೆಗಳಲ್ಲಿಯೂ ಕೌನ್ಸಿಲಿಂಗ ಮೂಲಕ ಸರಕಾರಿ ನೌಕರರ ವರ್ಗಾವಣೆ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂದು ಹೇಳಿದರು.ಹಿಂದುಳಿದ ನಮ್ಮ ಭಾಗದ ಜಿಲ್ಲೆಗಳ ಅಭಿವೃದ್ಧಿಗಾಗಿ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕಿದೆ. ದೇಶದಲ್ಲಿಯೇ ಅತ್ಯುತ್ತಮ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ ತಳಕಲನಲ್ಲಿ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ನೌಕರರಿಗೆ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಶುಭಾಶಯಗಳು ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಮಾತನಾಡಿ ಸರಕಾರಿ ನೌಕರರು ಸರಕಾರಿ ನೌಕರಿ ಸೇರಿದಾಗಿನಿಂದ ಹಿಡಿದು ನಿವೃತ್ತಿ ಜೀವನದ ತನಕ ತಮ್ಮ ಕುಟುಂಬದ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಕೆಲಸ ಮಾಡುತ್ತಾರೆ. ಜನರು ಸಮಸ್ಯೆಗಳನ್ನು ತೆಗೆದುಕೊಂಡು ತಮ್ಮ ಕಛೇರಿಗೆ ಬಂದಾಗ ಅವರ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಅಧಿಕಾರಿಗಳು ಸ್ಪಂದನೆ ನೀಡಿಬೇಕು. ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಮಾತನಾಡಿ ಒಂದು ದೇಶ ಹಾಗೂ ರಾಜ್ಯಗಳ ಆರ್ಥಿಕ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ ಇದೆ. ಸರಕಾರಿ ನೌಕರರು ತಮ್ಮ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಸಾರ್ವಜನಿಕರ ಸೇವೆ ಮಾಡುತ್ತಾರೆ. ನಮ್ಮ ಜಿಲ್ಲೆಯಲ್ಲಿ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಾವು ಸರಿಯಾಗಿ ಸ್ಪಂದನೆ ಮಾಡಬೇಕಿದೆ ಎಂದು ಹೇಳಿದರು.ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಮಾತನಾಡಿ ನೌಕರರು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು. ಸರಿಯಾದ ಸಮಯಕ್ಕೆ ಕಛೇರಿಗೆ ಹೋಗಬೇಕು. ಜನರು ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಕಛೇರಿಗೆ ಬಂದಾಗ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಾವು ಮಾಡುವ ಕೆಲಸದ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರಬೇಕು ಅಂದಾಗ ಜನರಿಗೆ ಸರಿಯಾದ ಮಾಹಿತಿ ನೀಡಿ ಅವರ ಸಮಸ್ಯೆಗೆ ಅರ್ಧ ಪರಿಹಾರ ಅಲ್ಲೆ ಸಿಗುತ್ತದೆ ಎಂದು ಹೇಳಿದರು.ರಾಜ್ಯ ಸರ್ಕಾರಿ ನೌಕರರ ಸಂಘ ಕೊಪ್ಪಳದ ಜಿಲ್ಲಾಧ್ಯಕ್ಷರಾದ ನಾಗರಾಜ ಆರ್. ಜುಮ್ಮನ್ನವರ ಮಾತನಾಡಿ ಸರಕಾರಿ ನೌಕರರು ವರ್ಷದ 364 ದಿನ ಸೇವೆ ಸಲ್ಲಿಸುತ್ತಾರೆ. ಸರಕಾರಿ ನೌಕರರ ದಿನಾಚರಣೆ ಆಚರಿಸಲು ಅವಕಾಶ ನೀಡಿದ ಸರ್ಕಾರಕ್ಕೆ ಎಲ್ಲಾ ನೌಕರ ಭಾಂದವರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೆನೆ. ಸರಕಾರಿ ನೌಕರರಿಗೆ ಜಿಲ್ಲೆಯಲ್ಲಿ ಹೊಸದಾಗಿ ವಸತಿ ಗೃಹಗಳಾಗಬೇಕು ಈಗಾಗಲೇ ಇರುವ ಹಳೆಯ ಕಟ್ಟಡಗಳು ಡೆಮಾಲಿಸ್ ಹಂತದಲ್ಲಿವೆ. ಸರಕಾರಿ ನೌಕರರಿಗೆ ಜಿಲ್ಲೆಯಲ್ಲಿ ತರಬೇತಿ ನೀಡಲು ಒಂದು ಕಟ್ಟಡದ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಶೇ. 40 ಪ್ರತಿಶತ ಹುದ್ದೆಗಳು ಖಾಲಿ ಇದ್ದರು ಎಲ್ಲಾ ಕೆಲಸವನ್ನು ನಾವು ನಿಭಾಯಿಸಿಕೊಂಡು ಹೋಗುತ್ತಿದ್ದೆವೆ ಎಂದು ಹೇಳಿದರು.ಸಿಂಧನೂರಿನ ಶ್ರೀ ಕೃಷ್ಣ ದೇವರಾಯ ವಿದ್ಯಾ ಸಂಸ್ಥೆಯ ಪ್ರಾಚಾರ್ಯರಾದ ಚಂದ್ರಕಲಾ ಪ್ರಕಾಶ ಅವರು ವೃತ್ತಿ ಜೀವನದಲ್ಲಿ ಒತ್ತಡ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.2023-24ನೇ ಸಾಲಿನ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದ ಘಟ್ಟಿರಡ್ಡಿಹಾಳ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಮಲ್ಲಮ್ಮ ಹೆಬ್ಬಾಳ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದ 10 ಜನ ಸರ್ಕಾರಿ ನೌಕರರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
2023-24ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿಗೆ ಭಾಜನರಾದವರ ವಿವರ. :ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ, ಕೊಪ್ಪಳ ಜಿಲ್ಲಾ ಖಜಾನೆ ಉಪನಿರ್ದೇಶಕ ಕೆ.ಸುರೇಶ ಕೊಪ್ಪಳ ಜಿಲ್ಲಾ ಪಂಚಾಯತ ಲೆಕ್ಕ ಅಧೀಕ್ಷಕ ಅಡವಿ ಅಶೋಕ, ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರರಾದ ಸತೀಶ್ ಕುಮಾರ, ಯಲಬುರ್ಗಾ ತಹಶೀಲ್ದಾರ ಕಚೇರಿ ಶಿರಸ್ತೇದಾರರಾದ ದೇವರಡ್ಡಿ ಶರಣಪ್ಪ ಮೂಲಿಮನಿ, ಕೊಪ್ಪಳ ಜಿಲ್ಲಾ ಲಸಿಕಾ ಉಗ್ರಾಣದ ಫಾರ್ಮಸಿ ಅಧಿಕಾರಿ ವಸಂತ ಬೆಲ್ಲದ, ತಳಕಲ್ ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿ ವೀರನಗೌಡ ಚನವೀರನಗೌಡ, ಬೂದಗುಂಪಾದ ಗ್ರಾಮ ಆಡಳಿತ ಅಧಿಕಾರಿ ರಮೇಶ ನಾಯ್ಕ, ಹಾಗೂ ಭಾಗ್ಯನಗರ ಪಟ್ಟಣ ಪಂಚಾಯತಿಯ ಹಿರಿಯ ಆರೋಗ್ಯ ನೀರೀಕ್ಷಕರಾದ ಪರಶುರಾಮ ಮಹೇಂದ್ರಕರ, ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಿರಿಯ ಆರೋಗ್ಯ ಸಹಾಯಕ ರವಿನಾಗೇಶ, ಈ ಎಲ್ಲಾ ನೌಕರರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ. ಸಹಾಯಕ ಆಯುಕ್ತರಾದ ಕ್ಯಾ. ಮಹೇಶ್ ಮಾಲಗಿತ್ತಿ. ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ. ಪ್ರಾಥಮಿಕ ಶಾಲಾ- ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣ ಬಸನಗೌಡ ಪಾಟೀಲ್. ಸೇರಿದಂತೆ ಜಿಲ್ಲಾ ಹಾಗೂ ವಿವಿಧ ತಾಲೂಕು ಘಟಕಗಳ ನೌಕರರ ಸಂಘದ ಪದಾಧಿಕಾರಿಗಳು. ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.