ಸರ್ಕಾರಿ ನೌಕರರ ಸೇವೆ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ: ಸ್ಪೀಕರ್ ಜಿ.ಎಸ್‌. ಪಾಟೀಲ

ಸರ್ಕಾರಿ ನೌಕರರ ಸೇವೆ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ: ಸ್ಪೀಕರ್ ಜಿ.ಎಸ್‌. ಪಾಟೀಲ  Government employees' service is a significant contribution to the state's development: Speaker G.S.

ಲೋಕದರ್ಶನ ವರದಿ  

ಧಾರವಾಡ, 28: ಸರ್ಕಾರದ ನಿರ್ದೇಶನದಂತೆ ವಿವಿಧ ಇಲಾಖೆಗಳ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಜನಪರ ಕಾರ್ಯಗಳು ನಡೆಯುತ್ತಿವೆ. ರಾಜ್ಯದ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದ್ದಾಗಿದೆ ಎಂದು ವಿಧಾನಸಭಾಧ್ಯಕ್ಷ ಜಿ.ಎಸ್‌. ಪಾಟೀಲ ಹೇಳಿದರು.  

ನಗರದ ಕ.ವಿ.ವ. ಸಂಘದ ಡಾ. ಪಾಪು ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ   ಕರ್ನಾಟಕ ವಿಭಾಗ ಮಟ್ಟದ ಸರ್ಕಾರಿ ನಿವೃತ್ತ ನೌಕರರ ಒಂದು ದಿನದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಶಾಸಕರು ಮತ್ತು ಸಚಿವರು ಸೇರಿ ಸದನದಲ್ಲಿ ರೂಪಿಸುವ ಎಲ್ಲ ಕಾನೂನು ಹಾಗೂ ಅಧಿನಿಯಮಗಳನ್ನು ನೆಲಮಟ್ಟದಲ್ಲಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ. ಕೋವಿಡ್‌-19 ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಸರ್ಕಾರಿ ನೌಕರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶಗಳನ್ನು ಪಾಲಿಸುವ ಮೂಲಕ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.  

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ. ಎಲ್‌. ಭೈರ​‍್ಪ ಮಾತನಾಡಿ, 30ಹಿ40 ವರ್ಷಗಳ ಕಾಲ ಗೌರವಯುತವಾಗಿ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ನಿವೃತ್ತಿಯ ಬಳಿಕವೂ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಕಾಲಕಾಲಕ್ಕೆ ಪಿಂಚಣಿ ಪರಿಷ್ಕರಣೆ, ಕೇಂದ್ರ ಸಮಾನ ಪಿಂಚಣಿ ಸೌಲಭ್ಯ ಹಾಗೂ ನಿವೃತ್ತ ನೌಕರರ ಆರೋಗ್ಯ ರಕ್ಷಣೆಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅವರ ಯೋಗಕ್ಷೇಮಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.  

ಶಾಸಕ ಎನ್‌.ಎಚ್‌. ಕೋನರಡ್ಡಿ, ಎಐಪಿಟಿಎಫ್ ಅಧ್ಯಕ್ಷ ಬಸವರಾಜ ಗುರಿಕಾರ, ಸಾಹಿತಿ ವೆಂಕಟೇಶ ಮಾಚಕನೂರ, ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಸಿದ್ಧರಾಮ ಮನಹಳ್ಳಿ ಸೇರಿದಂತೆ ಹಲವರು ಮಾತನಾಡಿದರು.  

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರು ಹಾಗೂ ಹಿರಿಯ ಸಾಧಕ ನಿವೃತ್ತ ನೌಕರರನ್ನು ಗೌರವಿಸಲಾಯಿತು.  ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಬಿ. ಪಾಟೀಲ ಅವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗುರು ತಿಗಡಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧ್ಯಕ್ಷ ಎ.ಬಿ. ಚನ್ನವೀರಗೌಡರ ವಂದಿಸಿದರು.  

ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ, ಗದಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು