ಅಂಬೇಡ್ಕರ್ ಆಶಯಗಳ ಸಾಕಾರಕ್ಕೆ ಸರ್ಕಾರ ಬದ್ಧ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಏ.14, ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ.  ಬಿ.ಆರ್.ಅಂಬೇಡ್ಕರ್ ಅವರ ತತ್ವ, ಆದರ್ಶಗಳ ಹಾದಿಯಲ್ಲಿ ನಡೆಯಲು ಸರ್ಕಾರ ದೃಢಸಂಕಲ್ಪ  ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ತಿಳಿಸಿದ್ದಾರೆ.ವಿಧಾನಸೌಧದ  ಪೂರ್ವದಿಕ್ಕಿನ ಬಳಿ  ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿರುವ    ಸಂವಿಧಾನ ಶಿಲ್ಪಿ, ಭಾರತ ರತ್ನ, ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್  ರವರ  129ನೇ ಜನ್ಮ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ  ಸಲ್ಲಿಸಿದ ನಂತರ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರಗೊಳಿಸಲು  ಸರ್ಕಾರ ಬದ್ಧವಾಗಿದೆ. ಅವರ ಜೀವನ ಹೋರಾಟದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ.  ಜಾತ್ಯತೀತ ಭಾರತದ ಕನಸ್ಸನ್ನು ಅವರು ಹೊಂದಿದ್ದರು. ಆಧುನಿಕ ಚಿಂತಕರಲ್ಲಿ ಒಬ್ಬರಾಗಿದ್ದ ಅಂಬೇಡ್ಕರ್ ಬಹುಮುಖಿ ಸಾಮರ್ಥ್ಯದ ಅಸಾಧಾರಣ ವ್ಯಕ್ತಿತ್ವ ಉಳ್ಳವರಾಗಿದ್ದರು. ಎಲ್ಲ  ಬಗೆಯ ತಾರತಮ್ಯವನ್ನು ಇನ್ನಿಲ್ಲವಾಗಿಸುವ ಹಾಗೂ ದಮನಿತರ ದನಿಯಾಗಿ, ಶೋಷಿತರ  ಕಿವಿಯಾಗಿದ್ದರು.  ಅಸಮಾನತೆ ವಿರುದ್ಧದ ಎಲ್ಲಾ ಚಳುವಳಿಗೂ ಅಂಬೇಡ್ಕರ್ ಚಿಂತನೆಗಳೇ  ಬಳುವಳಿಯಾಗಿವೆ ಎಂದರು‌
 ಸಾಮಾಜಿಕ ನ್ಯಾಯದ ಪರಿಕಲ್ಪನೆಯ  ಭಾರತದ ಸಂವಿಧಾನವನ್ನು ಇತರ ದೇಶಗಳು ಅನಕರಿಸುತ್ತಿವೆ ಎಂದ ಮುಖ್ಯಮಂತ್ರಿ ಸಂವಿಧಾನ  ಶಿಲ್ಪಿ ಅಂಬೇಡ್ಕರ್ ಅವರು ಶ್ರೇಷ್ಠ ಆರ್ಥಿಕ ತಜ್ಞ, ರಾಜಕೀಯ ಚಿಂತಕ, ಮಹಾ ಮಾನವತಾವಾದಿ  ಎಂದು ಬಣ್ಣಿಸಿದರು.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಉಪ  ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ,  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.