ಉತ್ತರ ಕರ್ನಾಟಕದ ಕುರುಬರಿಗೆ ಸಚಿವ ಸ್ಥಾನ ನೀಡಿ: ಕಂಕನವಾಡಿ ಆಗ್ರಹ

ಉತ್ತರ ಕರ್ನಾಟಕದ ಕುರುಬರಿಗೆ ಸಚಿವ ಸ್ಥಾನ ನೀಡಿ: ಕಂಕನವಾಡಿ ಆಗ್ರಹ  Give a ministerial post to the Kurubas of North Karnataka: Kankanavadi demands

ಕೊಲ್ಹಾರ 09: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕ ಭಾಗದ ಕುರುಬ ಸಮುದಾಯದ ಶಾಸಕರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಕುರುಬ ಸಮಾಜದ ಮುಖಂಡರು ಆಗ್ರಹಿಸಿದರು.  ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬೀರ​‍್ಪ ಜುಮನಾಳ, ರಾಜ್ಯದಲ್ಲಿ ಕುರುಬ ಸಮುದಾಯದ 16 ಶಾಸಕರು ಆಯ್ಕೆಯಾಗಿದ್ದಾರೆ. ಸಮುದಾಯದ ಸಂಖ್ಯಾಬಲ ಹಾಗೂ ರಾಜಕೀಯ ಕೊಡುಗೆಯನ್ನು ಪರಿಗಣಿಸಿ ಕನಿಷ್ಠ ನಾಲ್ವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಈವರೆಗೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದ ಒಬ್ಬ ಕುರುಬ ಶಾಸಕರಿಗೂ ಸಚಿವ ಸ್ಥಾನ ದೊರೆಯದಿರುವುದು ಸಮುದಾಯದಲ್ಲಿ ನಿರಾಸೆ ಮೂಡಿಸಿದೆ ಎಂದು ಹೇಳಿದರು.  

ಸಮಾಜದ ಮುಖಂಡ ಹಾಗೂ ಜಿಲ್ಲಾ ಕೆಡಿಪಿ ಸದಸ್ಯ ಸತೀಶಕುಮಾರ ಅಡವಿ ಮಾತನಾಡಿ, ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರ ಹೆಸರು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿತ್ತು. ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಕೆ.ಸಿ. ವೇಣುಗೋಪಾಲ್ ಅವರ ಮಟ್ಟದಲ್ಲಿಯೂ ಅವರ ಹೆಸರು ಪ್ರಸ್ತಾಪವಾಗಿತ್ತು. ಆದರೆ ಅಂತಿಮ ಹಂತದಲ್ಲಿ ನಡೆದ ಬೆಳವಣಿಗೆಗಳಿಂದ ಸಚಿವ ಸ್ಥಾನ ಕೈತಪ್ಪಿದೆ ಎಂದು ಹೇಳಿದರು.  ಇನ್ನೂ ಎಂಎಲ್ಸಿಯಾಗಿ ಅಧಿಕಾರ ಸ್ವೀಕರಿಸದ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಸಚಿವ ಸ್ಥಾನದ ಪಟ್ಟಿಗೆ ಸೇರಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದರಿಂದ ಉತ್ತರ ಕರ್ನಾಟಕದ ಕುರುಬ ಸಮುದಾಯಕ್ಕೆ ದೊರೆಯಬೇಕಿದ್ದ ಅವಕಾಶ ತಪ್ಪಿದೆ. ಆಗಿರುವ ತಪ್ಪನ್ನು ಸರಿಪಡಿಸಿ ಬಸವರಾಜ ಶಿವಣ್ಣನವರ ಅಥವಾ ರಾಘವೇಂದ್ರ ಹಿಟ್ನಾಳ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.  

ಸಚಿವ ಸಂಪುಟದಲ್ಲಿ ಇನ್ನೂ ಒಂದು ಸ್ಥಾನ ಭರ್ತಿಯಾಗಬೇಕಿದೆ. ಆ ಸ್ಥಾನವನ್ನು ಉತ್ತರ ಕರ್ನಾಟಕದ ಕುರುಬ ಸಮುದಾಯದ ಅರ್ಹ ಶಾಸಕರಿಗೆ ನೀಡಬೇಕು. ಇಲ್ಲವಾದರೆ ಸಮುದಾಯದಲ್ಲಿ ಅಸಮಾಧಾನ ಮತ್ತಷ್ಟು ಹೆಚ್ಚಾಗಲಿದ್ದು, ಅದರ ರಾಜಕೀಯ ಪರಿಣಾಮವನ್ನು ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.  ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಲ್ಲಿದ್ದ ಅವಧಿಯುದ್ದಕ್ಕೂ ಕುರುಬ ಸಮುದಾಯದ ಬಹುಪಾಲು ಜನರು ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ ಇದೀಗ ಸಮುದಾಯಕ್ಕೆ ನೀರೀಕ್ಷಿತ ಗೌರವ ಹಾಗೂ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಭಾವನೆ ಮೂಡಿದೆ. ಪಕ್ಷದ ವರಿಷ್ಠರು ಈ ಅಸಮಾಧಾನವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.  

ಹಿರಿಯ ಪತ್ರಕರ್ತ ಹಾಗೂ ಸಮಾಜಸೇವಕ ಬಸವರಾಜ ಕಂಕನವಾಡಿ ಮಾತನಾಡಿ, ಉತ್ತರ ಕರ್ನಾಟಕದ ಕುರುಬ ಸಮುದಾಯ ಕಾಂಗ್ರೆಸ್ ಪಕ್ಷದ ಪ್ರಮುಖ ಸಾಮಾಜಿಕ ಆಧಾರವಾಗಿದೆ. ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ. ಆದರೂ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಸೂಕ್ತ ಪ್ರಾತಿನಿಧ್ಯ ನೀಡದಿರುವುದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದರು.  ಸಚಿವ ಸಂಪುಟ ವಿಸ್ತರಣೆ ವೇಳೆ ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ ಹಾಗೂ ಸಮುದಾಯದ ಕೊಡುಗೆಯನ್ನು ಪರಿಗಣಿಸಬೇಕು. ಇನ್ನೂ ಅವಕಾಶ ಇರುವುದರಿಂದ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರು ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿ ಉತ್ತರ ಕರ್ನಾಟಕದ ಕುರುಬ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಲಕ್ಷ್ಮಣ ಹಂದ್ರಾಳ ಒತ್ತಾಯಿಸಿದರು.  ಸುದ್ದಿಗೋಷ್ಠಿಯಲ್ಲಿ ಬಸವರಾಜ ಕಂಕನವಾಡಿ, ಲಕ್ಷ್ಮಣ ಹಿರೇಕುರುಬರ, ಮಾಳಪ್ಪ ಪೂಜಾರಿ, ವಿಠ್ಠಲ ಬಳ್ಳೂರು, ಐ.ಸಿ. ರಾಕುಂಪಿ ಸೇರಿದಂತೆ ಕುರುಬ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.