ಕೊಲ್ಹಾರದಲ್ಲಿ ಗಣೇಶೋತ್ಸವ ಶಾಂತಿ ಸಭೆ: ನಿಯಮ ಪಾಲನೆಗೆ ಸೂಚನೆ

ಕೊಲ್ಹಾರದಲ್ಲಿ ಗಣೇಶೋತ್ಸವ ಶಾಂತಿ ಸಭೆ: ನಿಯಮ ಪಾಲನೆಗೆ ಸೂಚನೆ  Ganeshotsav peace meeting in Kolhar: Instructions to adhere to rules


ಕೊಲ್ಹಾರ 06: ಗಣೇಶ ಚತುರ್ಥಿಯನ್ನು ಶಾಂತಿ, ಸೌಹಾರ್ದತೆ ಹಾಗೂ ಭಕ್ತಿಭಾವದಿಂದ ಆಚರಿಸುವ ಕುರಿತು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಪೂಜೆ, ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಶಿಸ್ತು ಪಾಲಿಸಬೇಕು ಎಂದು ತಹಶೀಲ್ದಾರ್ ಸಂತೋಷ ಮ್ಯಾಗೇರಿ ಸೂಚಿಸಿದರು. ಪಿಎಸ್‌ಐ ಅಶೋಕ್ ನಾಯಕ್ ಮಾತನಾಡಿ, ಗಣೇಶೋತ್ಸವ ಮಂಡಳಿಗಳಿಗೆ ಅಗತ್ಯ ಅನುಮತಿಗಳನ್ನು ಸಿಂಗಲ್ ವಿಂಡೋ ವ್ಯವಸ್ಥೆಯ ಮೂಲಕ ಪೊಲೀಸ್ ಕಚೇರಿಯಲ್ಲಿ ನೀಡಲಾಗುವುದು.

ಧ್ವನಿವರ್ಧಕ ಬಳಕೆ ಸೇರಿದಂತೆ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀರೇಶ್ ಹಟ್ಟಿ ಮಾತನಾಡಿ, ಮೂರ್ತಿ ಪ್ರತಿಷ್ಠಾಪನಾ ಸ್ಥಳ, ಮೆರವಣಿಗೆ ಮಾರ್ಗ ಹಾಗೂ ವಿಸರ್ಜನಾ ಸ್ಥಳಗಳಲ್ಲಿ ಸ್ವಚ್ಛತೆ ಮತ್ತು ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು. ಸಭೆಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವಂತೆ ಹಾಗೂ ವಿಸರ್ಜನೆ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಲಾಯಿತು. ವಿವಿಧ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು, ಮುಖಂಡರು, ಪೊಲೀಸ್ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.