ಬಡ ರೋಗಿಗೆ ಉಚಿತ ಹರ್ನಿಯಾ ಶಸ್ತ್ರಚಿಕಿತ್ಸೆ; ಸೇವಾ ತಂಡದ ಮಾನವೀಯ ನೆರವು

ಬಡ ರೋಗಿಗೆ ಉಚಿತ ಹರ್ನಿಯಾ ಶಸ್ತ್ರಚಿಕಿತ್ಸೆ; ಸೇವಾ ತಂಡದ ಮಾನವೀಯ ನೆರವು Free hernia surgery for a poor patient; humanitarian aid from a service team

ಲೋಕದರ್ಶನ ವರದಿ

  ಗದಗ 13: ನಗರದ ಬಸವೇಶ್ವರ ನಗರದ ನಿವಾಸಿ ಗಂಗಾಧರ ಇಟಗಿ ಅವರು ತೀವ್ರ ಹರ್ನಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಆರ್ಥಿಕ ಸಂಕಷ್ಟದಿಂದ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು. ಈ ವಿಷಯ ತಿಳಿದ ನಗರದ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪಾಲನಕರ ಅವರು ವೈದ್ಯಕೀಯ ನೆರವಿಗಾಗಿ ಮುಂದಾದರು.  

ಬಡ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಡಾ. ಎಚ್‌.ಕೆ. ಪಾಟೀಲ ಸೇವಾ ತಂಡದ ಅಧ್ಯಕ್ಷ ಪ್ರಭು ಬುರ್ಬುರೆ ಅವರ ನೇತೃತ್ವದಲ್ಲಿ, ಸೇವಾ ತಂಡದ ಸದಸ್ಯರಾದ ರಾಘವೇಂದ್ರ ಪಾಲನಕರ ಹಾಗೂ ಮೋಹನ ದೊಡ್ಡಕುಂದಿ ಅವರ ಮೂಲಕ ಗಂಗಾಧರ ಇಟಗಿ ಅವರನ್ನು ಕೆಎಚ್ ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ಜಿಮ್ಸ್‌) ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಅವರಿಗೆ ಪರಿಚಯಿಸಿ, ಅಗತ್ಯ ಚಿಕಿತ್ಸೆ ನೀಡುವಂತೆ ಮನವಿ ಸಲ್ಲಿಸಲಾಯಿತು.  

ಮನವಿಗೆ ಸ್ಪಂದಿಸಿದ ಆಸ್ಪತ್ರೆ ಆಡಳಿತವು ರೋಗಿಯ ವೈದ್ಯಕೀಯ ಪರೀಕ್ಷೆ ನಡೆಸಿ, ಜುಲೈ 9, 2026ರಂದು ತಜ್ಞ ವೈದ್ಯರ ತಂಡದಿಂದ ಹರ್ನಿಯಾ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು.  

ಸೇವಾ ತಂಡದ ಕ್ಯಾಪ್ಟನ್ ನಾಗರಾಜ ಯರಗುಡಿ ಅವರ ಸೇವಾ ಮನೋಭಾವದಿಂದ ಈ ಚಿಕಿತ್ಸೆ ಸಾಧ್ಯವಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರೋಗಿ ಚೇತರಿಸಿಕೊಳ್ಳುತ್ತಿದ್ದಾರೆ.  

ಉಚಿತ ಚಿಕಿತ್ಸೆಗೆ ಸಹಕರಿಸಿದ ಕೆಎಚ್ ಪಾಟೀಲ ಆಸ್ಪತ್ರೆಯ ವೈದ್ಯರ ತಂಡ, ಕ್ಯಾಪ್ಟನ್ ಬಸವರಾಜ ಚಲವಾದಿ, ವೆಂಕಟೇಶ್ ಕುರ್ತಕೋಟಿ, ರಾಘವೇಂದ್ರ ಪಾಲನಕರ ಹಾಗೂ ಸೇವಾ ತಂಡದ ಸದಸ್ಯರ ಮಾನವೀಯ ಸೇವೆಯನ್ನು ಗಂಗಾಧರ ಇಟಗಿ ಅವರ ಕುಟುಂಬದ ಸದಸ್ಯರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.