ಏ.17ರಂದು ಮಹಿಳಾ ವಿವಿಯಲ್ಲಿ ಉಚಿತ ‘ಟೆಲಿವಿಷನ್ ಆ್ಯಂಕರಿಂಗ್‌’ ಕಾರ್ಯಾಗಾರ

ಏ.17ರಂದು ಮಹಿಳಾ ವಿವಿಯಲ್ಲಿ ಉಚಿತ ‘ಟೆಲಿವಿಷನ್ ಆ್ಯಂಕರಿಂಗ್‌’ ಕಾರ್ಯಾಗಾರ Free 'Television Anchoring' workshop at Women's University on April 17

ಲೋಕದರ್ಶನ ವರದಿ 

ವಿಜಯಪುರ 10:  ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ವಿಶ್ವವಿದ್ಯಾನಿಲಯದ ಸಂಲಗ್ನ ಕಾಲೇಜುಗಳಲ್ಲಿ 6ನೆಯ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಪದವಿ (ಯುಜಿ) ವಿದ್ಯಾರ್ಥಿನಿಯರಿಗಾಗಿ ಏಪ್ರಿಲ್ 17ರಂದು ಒಂದು ದಿನದ ‘ಟೆಲಿವಿಷನ್ ಆ್ಯಂಕರಿಂಗ್‌’ ಮತ್ತು ‘ಸ್ಟುಡಿಯೋ ಭೇಟಿ” ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಪದವಿ ಪೂರ್ಣಗೊಳಿಸಿರುವವರೂ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. 

ಒಂದು ದಿನದ ಈ ವಿಶೇಷ ಕಾರ್ಯಾಗಾರವನ್ನು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅತ್ಯಾಧುನಿಕ ಟಿವಿ ಸ್ಟುಡಿಯೋದಲ್ಲಿ ಆಯೋಜಿಸಲಾಗಿದೆ. ತಾಂತ್ರಿಕವಾಗಿ ಸುಸಜ್ಜಿತವಾಗಿರುವ ಈ ಸ್ಟುಡಿಯೋ ವಿದ್ಯಾರ್ಥಿನಿಯರಿಗೆ ನೈಜ ಮಾಧ್ಯಮ ಲೋಕದ ಅನುಭವವನ್ನು ಒದಗಿಸುವಂತೆ ರೂಪುಗೊಂಡಿದೆ. ಇಲ್ಲಿ ಅಳವಡಿಸಲಾದ ಅತ್ಯಾಧುನಿಕ ಆಡಿಯೋ-ವಿಡಿಯೋ ಪ್ರೊಡಕ್ಷನ್ ವ್ಯವಸ್ಥೆಗಳು ಪ್ರಾಯೋಗಿಕ ಕಲಿಕೆಗೆ ಹೊಸ ಆಯಾಮವನ್ನು ನೀಡುತ್ತವೆ. 

ಈ ಸ್ಟುಡಿಯೋದಲ್ಲಿ ನಾಲ್ಕು ಅತ್ಯಾಧುನಿಕ ಹೈ-ಡೆಫಿನಿಷನ್ ಕ್ಯಾಮೆರಾಗಳು, ಪ್ರೊಫೆಷನಲ್ ಆಡಿಯೋ ಮಿಕ್ಸಿಂಗ್ ಕನ್ಸೋಲ್, ಲೈವ್ ರೆಕಾಡಿಂರ್ಗ್ ಸೌಲಭ್ಯಗಳು, ಆನ್‌ಲೈನ್ ಎಡಿಟಿಂಗ್ ಸೂಟ್ ಸೇರಿದಂತೆ ಸಂಪೂರ್ಣ ತಾಂತ್ರಿಕ ಮೂಲಸೌಕರ್ಯವನ್ನು ಕಲ್ಪಿಸಲಾಗಿದೆ. ಜೊತೆಗೆ, ಜಾಗತಿಕ ಪ್ರಪಂಚದ ಮಟ್ಟದಲ್ಲಿ ಬಳಸಲಾಗುವ ಅತ್ಯುತ್ತಮ ಎಡಿಟಿಂಗ್ ಸಾಫ್ಟವೇರ್‌ಗಳು  ವಿದ್ಯಾರ್ಥಿನಿಯರ ಸಾಮರ್ಥ್ಯವನ್ನು ವೃತ್ತಿಪರ ಮಟ್ಟಕ್ಕೆ ತಲುಪಿಸಲು ನೆರವಾಗುತ್ತಿವೆ. 

ಇಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಸ್ಟುಡಿಯೋ ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದು, ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ನಡೆಯುವ ಕಾರ್ಯಾಗಾರಗಳು ಕೇವಲ ಸಿದ್ಧಾಂತಕ್ಕೆ ಸೀಮಿತವಾಗದೇ, ನೈಜ ಪ್ರಾಯೋಗಿಕ ತರಬೇತಿಯನ್ನು ಒದಗಿಸುವ ಮೂಲಕ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ, ತಾಂತ್ರಿಕ ನಿಪುಣತೆ ಹಾಗೂ ಸೃಜನಶೀಲತೆಯನ್ನು ಬೆಳೆಸುತ್ತಿವೆ. 

ಈ ವಿಭಾಗವು ನಿರಂತರವಾಗಿ ವಿವಿಧ ವಿಶಿಷ್ಟ ಕಾರ್ಯಾಗಾರಗಳು, ತರಬೇತಿ ಶಿಬಿರಗಳು ಹಾಗೂ ಮಾಧ್ಯಮ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿನಿಯರನ್ನು ಭವಿಷ್ಯದ ಮಾಧ್ಯಮ ಕ್ಷೇತ್ರಕ್ಕೆ ಸಿದ್ಧಗೊಳಿಸುತ್ತಿದೆ. ಇದರ ಫಲವಾಗಿ ವಿದ್ಯಾರ್ಥಿನಿಯರು ವರದಿಗಾರಿಕೆ, ವೀಡಿಯೋ ನಿರ್ಮಾಣ, ಸಂಪಾದನೆ, ಆ್ಯಂಕರಿಂಗ್ ಹಾಗೂ ಡಿಜಿಟಲ್ ಮಾಧ್ಯಮ ಕೌಶಲಗಳಲ್ಲಿ ಪ್ರಾವೀಣ್ಯತೆ ಪಡೆದು, ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಟಿವಿ ಸ್ಟುಡಿಯೋ ಮತ್ತು ಅದರಲ್ಲಿ ಆಯೋಜಿಸಲಾದ ಕಾರ್ಯಾಗಾರಗಳು ವಿದ್ಯಾರ್ಥಿನಿಯರ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನ ಕಟ್ಟಿಕೊಳ್ಳಲು ಬಲವಾದ ಅಡಿಪಾಯವನ್ನು ರೂಪಿಸುತ್ತಿವೆ. 

ಇದೀಗ ಏಪ್ರಿಲ್ 17ರಂದು ಹಮ್ಮಿಕೊಂಡಿರುವ ‘ಟೆಲಿವಿಷನ್ ಆ್ಯಂಕರಿಂಗ್‌’ ಮತ್ತು ‘ಸ್ಟುಡಿಯೋ ಭೇಟಿ” ಕಾರ್ಯಾಗಾರದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಈ ಕಾರ್ಯಾಗಾರದಲ್ಲಿ ಭಾಗವಹಿಸುವ ವಿದ್ಯಾರ್ಥಿನಿಯರಿಗೆ ಸ್ಟುಡಿಯೋದಲ್ಲಿ ಲಭ್ಯವಿರುವ ಕ್ಯಾಮೆರಾ, ಕಂಟ್ರೋಲ್ ರೂಂ, ಮ್ಯಾಕ್‌ಲ್ಯಾಬ್, ಪೋಸ್ಟ್‌ ಪ್ರೊಡಕ್ಷನ್ ಸೆಂಟರ್, ಕ್ಯಾಮೆರಾ, ಆನ್‌ಲೈನ್ ಎಡಿಟಿಂಗ್ ಶೂಟ್,  ಪಿಸಿಆರ್ ಮತ್ತಿತರ ಅತ್ಯಾಧುನಿಕ ತಾಂತ್ರಿಕ ಪರಿಚಯ ಮಾಡಿಕೊಡುವುದಲ್ಲದೇ ಆಂಕರಿಂಗ್ ಕೌಶಲಗಳನ್ನು ಕಲಿಸಿಕೊಡಲಾಗುತ್ತಿದೆ. ಆಸಕ್ತ ವಿದ್ಯಾರ್ಥಿನಿಯರು ಹೆಸರು ನೋಂದಾಯಿಸಿಕೊಳ್ಳಲು ಡಾ.ತಹಮೀನಾ ನಿಗಾರ ಸುಲ್ತಾನಾ (9482248372) ಅಥವಾ ಡಾ.ಸಂದೀಪ್ (9844681398) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.