ಜಾನಪದ ಕಲೆಗೆ ಸಾವಿಲ್ಲ: ರಮೇಶ ಈಳಗೇರ

ಜಾನಪದ ಕಲೆಗೆ ಸಾವಿಲ್ಲ: ರಮೇಶ ಈಳಗೇರ  Folk art is immortal: Ramesh Ilager

ರಾಣೆಬೆನ್ನೂರು, ಆ. 26: ಕಲೆ ಮತ್ತು ಕಲಾವಿದರು ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಹರಿಕಾರರಾಗಿದ್ದಾರೆ. ಕಲೆ ಮತ್ತು ಕಲಾವಿದರು ಉಳಿದು ಬೆಳೆದರೆ ದೇಶದ ಹಾಗೂ ನಾಡಿನ ಸಾಂಸ್ಕೃತಿಕ ಪರಂಪರೆ ಉಳಿಯಲು ಸಾಧ್ಯ ಎಂದು ಶ್ರೀ ನಾರಾಯಣಸ್ವಾಮಿ ಸೇವಾ ಸಮಿತಿ ಕಾರ್ಯದರ್ಶಿ ರಮೇಶ ಈಳಗೇರ ಹೇಳಿದರು.  

ತಾಲೂಕಿನ ಹಳೆ ಹೊನ್ನತ್ತಿ ಗ್ರಾಮದ ಶ್ರೀ ನಾರಾಯಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ನಾರಾಯಣಸ್ವಾಮಿ ಸೇವಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ‘ಶ್ರಾವಣ ಸಂಭ್ರಮ’ದ ಅಂಗವಾಗಿ ಜಾನಪದ-ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಗ್ರಾಮೀಣ ಸಂಸ್ಕೃತಿ ನಿಜವಾದ ಹಾಗೂ ನೈಜ ಸಂಸ್ಕೃತಿಯಾಗಿದೆ. ಜಾನಪದ ಕಲೆಗೆ ಎಂದೆಂದಿಗೂ ಅಂತ್ಯ ಎಂಬುದಿಲ್ಲ. ಅದು ಜನಸಾಮಾನ್ಯರ ಜೀವನದ ಭಾಗವಾಗಿ ಹಾಸುಹೊಕ್ಕಾಗಿದೆ ಎಂದು ಅವರು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಸಮಿತಿ ಅಧ್ಯಕ್ಷ ಅರುಣಕುಮಾರ ಮುದ್ರಿ ವಹಿಸಿದ್ದರು. ಶ್ರೀ ದುರ್ಗಾದೇವಿ ಕಲಾತಂಡದ ಪವಿತ್ರ ಬ. ಭಜಂತ್ರಿ ಹಾಗೂ ಗುತ್ಗಲ್ ಸಪ್ತಸ್ವರ ಕಲಾತಂಡದ ನಿಂಗಪ್ಪ ನೀಲಪ್ಪ ಪಸಗಿ ಸಂಗಡಿಗರು ಸುಗಮ ಸಂಗೀತ ಹಾಗೂ ಜಾನಪದ ಸಂಗೀತ ಕಾರ್ಯಕ್ರಮ ನೀಡಿದರು.  

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ ಹುಬ್ಬಳ್ಳಿ, ನಾಗರಾಜ ಗುಡಗೂರು, ಕರಬಸಪ್ಪ ಬೆನ್ನೂರು, ಚಿತ್ರ​‍್ಪ ತಿಮ್ಮೇನಹಳ್ಳಿ, ಕರಬಸಪ್ಪ ಹರವಿ, ಪ್ರವೀಣ ಹುಬ್ಬಳ್ಳಿ ಸೇರಿದಂತೆ ಗಣ್ಯರು ಹಾಗೂ ಗ್ರಾಮ ಮುಖಂಡರು ಉಪಸ್ಥಿತರಿದ್ದರು.  

ಶ್ರಾವಣ ಮಾಸದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದರಾದ ಪವಿತ್ರ ಭಜಂತ್ರಿ ಹಾಗೂ ನಿಂಗಪ್ಪ ಪಸಗಿ ತಂಡದ ಸುಗಮ ಮತ್ತು ಜಾನಪದ ಸಂಗೀತಕ್ಕೆ ಗ್ರಾಮೀಣ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.