ಸಕ್ಕರೆ ಕಾರ್ಖಾನೆಗೆ ರಾಷ್ಟ್ರಮಟ್ಟದ ಪ್ರಥಮ ಪ್ರಶಸ್ತಿ

  ಸಕ್ಕರೆ ಕಾರ್ಖಾನೆಗೆ ರಾಷ್ಟ್ರಮಟ್ಟದ ಪ್ರಥಮ ಪ್ರಶಸ್ತಿ  First National Award for Sugar Factory

ಲೋಕದರ್ಶನ ವರದಿ 

  ಮಾಂಜರಿ  22: ಕಬ್ಬು ಅಭಿವೃದ್ಧಿ ಹಾಗೂ ರೈತರ ಕಬ್ಬು ಇಳುವರಿ ಹೆಚ್ಚಿಸುವ ಕ್ಷೇತ್ರದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಮಾಂಜರಿ ಸಕ್ಕರೆ ಕಾರ್ಖಾನೆಗೆ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿ (ಓಈಅಖಈ) ವತಿಯಿಂದ ರಾಷ್ಟ್ರಮಟ್ಟದ ಪ್ರಥಮ ಪ್ರಶಸ್ತಿ ಲಭಿಸಿದೆ. ‘ಅಧಿಕ ಸಕ್ಕರೆ ಇಳುವರಿ ಪ್ರದೇಶದಲ್ಲಿ ಉತ್ತಮ ಕಬ್ಬು ಅಭಿವೃದ್ಧಿ’ ವಿಭಾಗದಲ್ಲಿ ಮಾಂಜರಿ ಸಕ್ಕರೆ ಕಾರ್ಖಾನೆಗೆ ಪ್ರಥಮ ಸ್ಥಾನ ದೊರೆತಿದೆ. ಸೆ. 22ರಂದು ನವದೆಹಲಿಯಲ್ಲಿ ನಡೆದ ಓಈಅಖಈನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.  

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರದ ಸಹಕಾರ ಸಚಿವ ಬಾಬಾಸಾಹೇಬ ಪಾಟೀಲ್ ಹಾಗೂ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿ ಅಧ್ಯಕ್ಷ ಹರ್ಷವರ್ಧನ್ ಪಾಟೀಲ್ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಕಾರ್ಖಾನೆಯ ಪರವಾಗಿ ನಿರ್ದೇಶಕರು ಹಾಗೂ ಅಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು. ದೇಶದ ಸಹಕಾರಿ ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿಗಾಗಿ ಓಈಅಖಈ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಾರ್ಖಾನೆಗಳ ವಾರ್ಷಿಕ ಕಾರ್ಯನಿರ್ವಹಣೆಯನ್ನು ವಿವಿಧ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ. ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಾರ್ಖಾನೆಗಳಿಗೆ ಪ್ರತಿವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.  

ಮಾಂಜರಿ ಸಕ್ಕರೆ ಕಾರ್ಖಾನೆಯು ಕಬ್ಬು ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ರೈತರ ಕಬ್ಬು ಬೆಳೆಯ ಇಳುವರಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಸಾಧನೆಯನ್ನು ಪರಿಗಣಿಸಿ ಓಈಅಖಈನಿಂದ ‘ಅಧಿಕ ಸಕ್ಕರೆ ಇಳುವರಿ ಪ್ರದೇಶದಲ್ಲಿ ಉತ್ತಮ ಕಬ್ಬು ಅಭಿವೃದ್ಧಿ’ ವಿಭಾಗದಲ್ಲಿ ಪ್ರಥಮ ಸ್ಥಾನ ನೀಡಲಾಗಿದೆ. ಈ ಸಂದರ್ಭದಲ್ಲಿ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಮಾತನಾಡಿ, ಕಾರ್ಖಾನೆಯ ರೂವಾರಿಗಳಾದ ‘ಪದ್ಮಶ್ರೀ’ ಡಾ. ಪ್ರಭಾಕರ ಕೋರೆ ಅವರ ಮಾರ್ಗದರ್ಶನ,

ನಿರ್ದೇಶಕ ಮಂಡಳಿಯ ಸೂಕ್ತ ನಿರ್ಧಾರಗಳು ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ್ ಪ್ರಭಾಕರ ಕೋರೆ ಅವರ ನಾಯಕತ್ವದ ಫಲವಾಗಿ ಈ ಪ್ರಶಸ್ತಿ ದೊರೆತಿದೆ ಎಂದು ಹೇಳಿದರು. ರೈತರು, ಅಧಿಕಾರಿಗಳು ಹಾಗೂ ಕಾರ್ಮಿಕರ ನಿರಂತರ ಪರಿಶ್ರಮ ಮತ್ತು ಸಹಕಾರವೂ ಈ ಸಾಧನೆಗೆ ಕಾರಣವಾಗಿದೆ. ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತಿರುವುದು ಕಾರ್ಖಾನೆಯ ರೈತರು ಹಾಗೂ ಕಾರ್ಮಿಕರಲ್ಲಿ ಸಂತಸ ಮೂಡಿಸಿದೆ.