ನಿವೃತ್ತ ಮುಖ್ಯಾಧ್ಯಾಪಕಿ ಸುಮಂಗಲಾ ತೋರಗಲ್ ಅವರಿಗೆ ಸನ್ಮಾನ

ನಿವೃತ್ತ ಮುಖ್ಯಾಧ್ಯಾಪಕಿ ಸುಮಂಗಲಾ ತೋರಗಲ್ ಅವರಿಗೆ ಸನ್ಮಾನ Felicitation of retired Headmistress Sumangala Toragal

ಲೋಕದರ್ಶನ ವರದಿ 

ಧಾರವಾಡ, ಆ.೨೪: ಶಿಕ್ಷಕರು ತಮ್ಮ ನಿವೃತ್ತಿಯ ನಂತರವೂ ಮನೆಯ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ಜೀವನದಲ್ಲಿ ಗಳಿಸಿದ ಜ್ಞಾನ, ಸಾಮರ್ಥ್ಯ ಹಾಗೂ ಸಂಪನ್ಮೂಲಗಳನ್ನು ಪರಿಚಯಿಸಿ, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್. ಹೇಳಿದರು. 

ಧಾರವಾಡ ಗ್ರಾಮೀಣ ತಾಲ್ಲೂಕಿನ ಕಲ್ಲೂರು ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಾಧ್ಯಾಪಕಿ ಸುಮಂಗಲಾ ತೋರಗಲ್ ಅವರ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವನ್ನು ನಗರದ ಅಶೋಕ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಕುಮಾರ ಕೆ.ಎಫ್., ನಿವೃತ್ತ ಶಿಕ್ಷಕರ ಪಕ್ವವಾದ ಬೋಧನಾ ಸಾಮರ್ಥ್ಯವನ್ನು ಮಕ್ಕಳು ಹಾಗೂ ಸಮಾಜದ ಹಿತಕ್ಕಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯಾಧ್ಯಾಪಕಿ ಸುಮಂಗಲಾ ತೋರಗಲ್, ಮಕ್ಕಳೊಂದಿಗೆ ಕಳೆದ ದಿನಗಳನ್ನು ಹಾಗೂ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ತಮ್ಮ ವೃತ್ತಿ ಜೀವನದ ತೃಪ್ತಿಯನ್ನು ಹಂಚಿಕೊAಡರು. 

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಜೀವನದುದ್ದಕ್ಕೂ ನಿಷ್ಠೆಯಿಂದ ೩೧ ವರ್ಷಗಳ ಕಾಲ ಬೋಧನೆ ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ನೆರವಾಗಿ, ಅವರ ಬದುಕಿಗೆ ಬೆಳಕಾಗಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು. 

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಖಜಾಂಚಿ ಆರ್.ಎಂ. ಹೊನ್ನಪ್ಪ ಮಾತನಾಡಿ, ನಿವೃತ್ತ ಶಿಕ್ಷಕರು ಸಮಾಜದ ಅಮೂಲ್ಯ ಸಂಪತ್ತು. ಅವರ ಸೇವಾನುಭವ ಹಾಗೂ ಜೀವನಾನುಭವ ಯುವ ಪೀಳಿಗೆಗೆ ದಾರಿದೀಪವಾಗಿದ್ದು, ನಿವೃತ್ತಿಯ ನಂತರವೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. 

ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಅಜಿತ್ ದೇಸಾಯಿ ಮಾತನಾಡಿ, ‘ಮಗು ದೇವರೆಂದು ಅರಿತು ಅನುಷ್ಠಾನ ಮಾಡಿದರೆ ಕ್ರಿಯಾಶೀಲತೆ ಮತ್ತು ಸಜ್ಜನಶೀಲತೆ ನಿರಂತರವಾಗಿರುತ್ತದೆ’ ಎಂದು ಹೇಳಿದರು. 

ತಾಲೂಕು ಘಟಕದ ಅಧ್ಯಕ್ಷ ಕೃಷ್ಣ ಬೊಂಗಾಳೆ ಮಾತನಾಡಿ, ದೀರ್ಘಕಾಲ ಆಡಳಿತ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕಿಯ ಕಾರ್ಯ ಮಾದರಿಯಾಗಿದೆ. ಹಿರಿಯ ಸದಸ್ಯರು ನಿವೃತ್ತಿಯ ನಂತರವೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾರ್ಗದರ್ಶನ ನೀಡುವುದು ಶ್ಲಾಘನೀಯ ಎಂದರು. 

ತಾಲೂಕು ಘಟಕದ ಕಾರ್ಯದರ್ಶಿ ಎನ್.ಎಸ್. ಕುಮಾರ, ನೌಕರರ ಸಂಘದ ಪದಾಧಿಕಾರಿ ಚಂದ್ರಶೇಖರ ತಿಗಡಿ, ಧಾರವಾಡ ತಾಲ್ಲೂಕಿನ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ಪದಾಧಿಕಾರಿ ರಾಜು ಮಾಳವಾಡ, ಸೈಯದಪೀರ್ ಕುಪ್ಪೇಲೂರು, ಸಾವಿತ್ರಿ ಪಟಗಾರ ಸೇರಿದಂತೆ ವಿವಿಧ ಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಾಧ್ಯಾಪಕಿ ಸುಮಂಗಲಾ ತೋರಗಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.