ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ

  ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ Felicitation of meritorious students at the Agricultural Credit Cooperative Society

ಲೋಕದರ್ಶನ ವರದಿ 

ಶಿಗ್ಗಾವಿ  30: ಜನರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಲಾಭದತ್ತ ಸಾಗಿದೆ. ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಮತ್ತಷ್ಟು ವಿಸ್ತರಿಸುವುದು ನಮ್ಮ ಗುರಿ ಎಂದು ಸಹಕಾರಿ ಧುರೀಣ ಶಿವಾನಂದ ರಾಮಗೇರಿ ಹೇಳಿದರು. 

ಮುಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಜನರ ವಿಶ್ವಾಸ ಉಳಿಸಿಕೊಂಡು ಅಭಿವೃದ್ಧಿಯತ್ತ ಸಾಗುತ್ತಿದೆ. ಸಂಘವು ಐದು ಲಕ್ಷದ ತೊಂಬತ್ತಾರು ಸಾವಿರ ರೂ. ಲಾಭ ಗಳಿಸಿದೆ. ಹುಲಸೋಗಿ, ವನಹಳ್ಳಿ ಹಾಗೂ ಗಂಜಿಗಟ್ಟಿ ಗ್ರಾಮದವರನ್ನೂ ಸಂಘದ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ರೈತರಿಗೆ ಗೊಬ್ಬರ, ಜನರಿಗೆ ಪಡಿತರ ವಿತರಿಸುತ್ತ ಪ್ರಾಮಾಣಿಕ ಕಾರ್ಯ ಮಾಡುತ್ತಿದೆ ಎಂದರು. 

ಇದೇ ಸಂದರ್ಭದಲ್ಲಿ ಗ್ರಾಮದ ಮಾಜಿ ಸೈನಿಕರನ್ನು, ಪ್ರಗತಿಪರ ರೈತರನ್ನು ಮತ್ತು ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. 

ಸಂಘದ ಉಪಾಧ್ಯಕ್ಷ ಬಸಪ್ಪ ಭದ್ರಶೆಟ್ಟಿ, ನಿರ್ದೇಶಕರಾದ ಉಳವನಗೌಡ ಪಾಟೀಲ, ಬಸವಣ್ಣೆಪ್ಪ ದುಂಡಪ್ಪನವರ, ಬಸವರಾಜ ಪೂಜಾರ, ಸುಭಾಷ್ ಕತ್ತಿ, ಕಲ್ಲಪ್ಪ ತಳವಾರ, ಯಲ್ಲಪ್ಪ ಬೆಂಗೇರಿ, ಪ್ರೇಮವ್ವ ಭರಮಗೌಡ್ರ, ನೀಲವ್ವ ಟೊಪಗಿ, ನಾಗನಗೌಡ ಪಾಟೀಲ, ಯಲ್ಲಪ್ಪ ಹರಿಜನ ಇದ್ದರು.