ಎಸ್‌ಡಿಎಂಸಿ ಅಧ್ಯಕ್ಷ, ಪದಾಧಿಕಾರಿಗಳ ಸನ್ಮಾನ: ಸಮವಸ್ತ್ರ ವಿತರಣೆ

ಎಸ್‌ಡಿಎಂಸಿ ಅಧ್ಯಕ್ಷ, ಪದಾಧಿಕಾರಿಗಳ ಸನ್ಮಾನ: ಸಮವಸ್ತ್ರ ವಿತರಣೆ Felicitation of SDMC President and Office-bearers; Distribution of Uniforms

ಲೋಕದರ್ಶನ ವರದಿ, 

ಜಮಖಂಡಿ 13: ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸವಾಂರ್ಗೀಣ ಅಭಿವೃದ್ಧಿಗೆ ಸರ್ಕಾರವು ವಿಶೇಷ ಕಾಳಜಿ ವಹಿಸುತ್ತಿದೆ. ಪೋಷಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಗರಸಭೆಯ ಮಾಜಿ ಸದಸ್ಯ ರಿಯಾಜ ತೇಲಸಂಗ ತಿಳಿಸಿದರು. 

ನಗರದ ರಹಿಮತ ನಗರದಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೂತನ ಎಸ್‌ಡಿಎಂಸಿ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಸನ್ಮಾನ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಮುಖ್ಯಶಿಕ್ಷಕ ಸಲಿಂ ನದಾಫ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ, ಸರ್ಕಾರಿ ಸೌಲಭ್ಯಗಳ ಲಾಭ ಪಡೆದು ಅವರನ್ನು ಉನ್ನತ ವಿದ್ಯಾವಂತರನ್ನಾಗಿ ರೂಪಿಸಬೇಕು ಎಂದರು. 

ಸಿಆರ್‌ಪಿ ಎಸ್‌.ಆರ್‌. ಇನಾಮದಾರ, ಸಾವಳಗಿ ಸಿಆರ್‌ಪಿ ಎಂ.ಎ. ಪೆಂಡಾರಿ ಮಾತನಾಡಿ, ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಮುಖ್ಯಶಿಕ್ಷಕರ ಕಾರ್ಯವೈಖರಿಯನ್ನು ಶ್ಲಾಘಿಸಿದರು.  ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ನೂತನ ಅಧ್ಯಕ್ಷ ಪಾಷಾ ಭಾಗವಾನ ಹಾಗೂ ಇತರ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. 

ಶಾಲೆಯ ಮುಖ್ಯಶಿಕ್ಷಕ ಸಲಿಂ ನದಾಫ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಯ ಮಕ್ಕಳಿಗೆ ಐಡೆಂಟಿಟಿ ಕಾರ್ಡ್‌ಗಳು, ಮಕ್ನಾಗಳು ಮತ್ತು ಎಲ್‌ಕೆಜಿ-ಯುಕೆಜಿ ಮಕ್ಕಳಿಗೆ ಟಿ-ಶರ್ಟ್‌ ಹಾಗೂ ಪ್ಯಾಂಟ್‌ಗಳನ್ನು ಉಚಿತವಾಗಿ ವಿತರಿಸಿದರು. ಶಿಕ್ಷಕರ ಈ ಜನಪರ ಕಾಳಜಿ ಕಾಲೋನಿ ನಿವಾಸಿಗಳ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಶಿಕ್ಷಕ ಎಸ್‌.ಎಸ್‌. ಜಾದವ ನಿರೂಪಿಸಿದರು, ಶಿಕ್ಷಕಿ ಮೂಬಶ್ರೀನ ಅವಟಿ ವಂದಿಸಿದರು.