ವಿಜಯನಗರ ಎಡದಂಡೆ 11-ಎ ಕಾಲುವೆಗೆ 1.5 ಟಿಎಂಸಿ ನೀರು ಹರಿಸಲು ರೈತರ ಮನವಿ

ವಿಜಯನಗರ ಎಡದಂಡೆ 11-ಎ ಕಾಲುವೆಗೆ 1.5 ಟಿಎಂಸಿ ನೀರು ಹರಿಸಲು ರೈತರ ಮನವಿ  Farmers' request to release 1.5 TMC of water into the Vijayanagara Left Bank 11-A canal

ಕೊಪ್ಪಳ, ಜು. 29: ವಿಜಯನಗರ ಎಡದಂಡೆ ಮುಖ್ಯ ಕಾಲುವೆಯ 11-ಎ ವಿತರಣಾ ಕಾಲುವೆಗೆ ತಕ್ಷಣ 1.5 ಟಿಎಂಸಿ ನೀರು ಹರಿಸುವಂತೆ ಆಗ್ರಹಿಸಿ ರೈತರು ಹಾಗೂ ಜನಪ್ರತಿನಿಧಿಗಳ ನಿಯೋಗವು ಮಂಗಳವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.  

ಈ ಹಿಂದೆ ಮುನಿರಾಬಾದ್ನ ತುಂಗಭದ್ರಾ ಜಲಾಶಯ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಕೈಗೊಂಡ ತೀರ್ಮಾನದಂತೆ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಡಾ. ಬಸವರಾಜ ಕ್ಯಾವಟರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ರೈತ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ವಿವರಿಸಿದರು.  

ಮನವಿಯಲ್ಲಿ, ಕೊರಗಲ್ ಅಣೆಕಟ್ಟಿನ ಕಾಲುವೆಗಳ ಹಕ್ಕಿನಡಿ ವಿಜಯನಗರ ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯ ಸಾವಿರಾರು ಎಕರೆ ಕೃಷಿಭೂಮಿಗೆ ಹಲವು ವರ್ಷಗಳಿಂದ ನೀರು ಪೂರೈಕೆಯಾಗುತ್ತಿದೆ. ಈ ಭಾಗದ ರೈತರು, ಜನರು ಹಾಗೂ ಜಾನುವಾರುಗಳು ಇದೇ ನೀರನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಲಾಯಿತು.  

ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯು ವಿಜಯನಗರ ಕಾಲುವೆಗಳಿಗೆ ವಾರ್ಷಿಕ 5.71 ಟಿಎಂಸಿ ಐತಿಹಾಸಿಕ ನೀರಿನ ಬಳಕೆಯನ್ನು ಅಧಿಕೃತವಾಗಿ ಮಾನ್ಯತೆ ನೀಡಿದೆ. ಹೊಸ ಯೋಜನೆಗಳಿಗಿಂತ ಐತಿಹಾಸಿಕ ಬಳಕೆಗೆ ಆದ್ಯತೆ ನೀಡಬೇಕು ಎಂದು ನ್ಯಾಯಮಂಡಳಿಯೂ ಸ್ಪಷ್ಟಪಡಿಸಿದೆ.

ಆದ್ದರಿಂದ ವಿಜಯನಗರ ಎಡದಂಡೆಯ 11-ಎ ಉಪ ಕಾಲುವೆಗೆ 1.5 ಟಿಎಂಸಿ ನೀರು ಬಿಡುಗಡೆ ಮಾಡುವುದು ಈ ಭಾಗದ ರೈತರ ಐತಿಹಾಸಿಕ ಹಾಗೂ ಕಾನೂನುಬದ್ಧ ಹಕ್ಕಾಗಿದೆ ಎಂದು ನಿಯೋಗ ಒತ್ತಾಯಿಸಿತು.