ಜಮಖಂಡಿ ತಾಲೂಕ ಸೌಧದ ಆವರಣದ ಮುಂದೆ ರೈತ ಸಂಘಟನೆಯಿಂದ ಪ್ರತಿಭಟನೆ

ಜಮಖಂಡಿ ತಾಲೂಕ ಸೌಧದ ಆವರಣದ ಮುಂದೆ ರೈತ ಸಂಘಟನೆಯಿಂದ ಪ್ರತಿಭಟನೆ Farmers' organization stages protest in front of the Jamkhandi Taluk Office premises

ಲೋಕದರ್ಶನ ವರದಿ 

ಜಮಖಂಡಿ 26 : ರಾಜ್ಯದಲ್ಲಿ ನಿಗದಿತ ಪ್ರಮಾಣದ ಮಳೆಯಾಗದೇ ಬರಗಾಲ ಎದುರಾಗಿದೆ. ಮುಂಗಾರು ಬೆಳೆಗಳು ಒಣಗಿ ಹೋಗಿವೆ. ಇದರಿಂದ ರೈತಾಪಿ ವರ್ಗ ಕಂಗಾಲಾಗಿದ್ದು ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಅಲ್ಲದೇ ಮುಂಗಾರು ಬೆಳೆಗಳ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ರೈತಸಂಘಟೆಯವರು ಪ್ರತಿಭಟನೆ ನಡೆಸಿದರು. 

ನಗರದ ತಾಲೂಕ ಸೌಧದ ಕಚೇರಿ ಆವರಣದ ಮುಂದೆ ಕೆಲಕಾಲ ಘೋಷಣೆಯನ್ನು ಕೂಗುತ್ತಾ ತಮ್ಮ ಬೇಡಿಕೆಯನ್ನು ಸರಕಾರ ಈಡೇರಿಸಬೇಕೆಂದು ಪ್ರತಿಭಟನೆ ನಡೆಸಿದ ಅವರು, ಮುಂಗಾರು ಮಳೆ ಬರದ ಕಾರಣ ಬರಗಾಲದ ಛಾಯೆ ಆವರಿಸಿದೆ. ಅಂತರ್ಜಲ ಮಟ್ಟ ಕುಸಿದು ಹೋಗಿದ್ದು ಬೋರ್‌ವೆಲ್‌ಗಳಿಂದ ನೀರಾವರಿ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಕೃರ್ತಿ ವಿಕೋಪದಿಂದ ರೈತರು ಕಂಗಾಲಾಗಿದ್ದು ಸರ್ಕಾರ ರೈತರ ಸಹಾಯಕ್ಕೆ ಮುಂದಾಗಬೇಕು ಎಂದರು. 

ಮಳೆಗಾಲ ಪ್ರಾರಂಭವಾಗುತ್ತದೆ ಎಂಬ ನಂಬಿಕೆಯಿಂದ ರೈತರು ಮುಂಗಾರು ಬೆಳೆಗಳ ಬಿತ್ತನೆ ಮಾಡಿದ್ದರು ಸಧ್ಯ ಮಳೆ ಇಲ್ಲದ ಕಾರಣ ಬೆಳೆಗಳೆಲ್ಲ ಒಣಗಿ ಹೋಗಿದೆ. ರೈತರ ಬೆಳೆಸಾಲ ಮನ್ನಾ ಮಾಡುವ ಮೂಲಕ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಸರ್ಕಾರ ಸ್ಪಂಧಿಸಬೇಕು, ಮುಂಗಾರು ಬೆಳಗಳ ಬಿತ್ತನೆಗೆ ರೈತರು ಸಾಕಷ್ಟು ಕರ್ಚು ಮಾಡಿಕೊಂಡಿದ್ದು ಬೆಳೆ ಪರಿಹಾರ ಒದಗಿಸಿಕೊಡಬೇಕು. ಸಂಕಷ್ಟದಲ್ಲಿರುವ ರೈತಾಪಿ ವರ್ಗಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಬೆಂಬಲವಾಗಿ ನಿಲ್ಲಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದರು.  

ರೈತಮುಖಂಡರಾದ ಶ್ರೀಶೈಲ ಭೂಮಾರ, ರಾಜು ನದಾಫ, ಹಣಮಂತ ಮಗದುಮ, ಬಾಹುಬಲಿ ನ್ಯಾಮಗೌಡ, ಕಲ್ಲಪ್ಪ ಬಿರಾದಾರ, ಕಲೂತಿ, ಸಿದ್ದುಗೌಡ ಪಾಟೀಲ , ಡಾ. ಅಜಯ ಕುಲಕರ್ಣಿ, ಶ್ರೀಶೈಲ ಮೈಗೂರ, ಪ್ರಸನ್ನ ಜಮಖಂಡಿ. ಧರೆಪ್ಪ ದಾನಗೌಡ, ಸುರೇಶ ಹಂಚಿನಾಳ, ಸೇರಿದಂತೆ ಅಥಣಿ, ಬಬಲೇಶ್ವರ ತಾಲೂಕಿನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.