ರೈತರ ಅಹೋರಾತ್ರಿ ಧರಣಿ 9ನೇ ದಿನಕ್ಕೆ

ರೈತರ ಅಹೋರಾತ್ರಿ ಧರಣಿ 9ನೇ ದಿನಕ್ಕೆ  Farmers' day-night protest enters 9th day.

ರೈತರ ಅಹೋರಾತ್ರಿ ಧರಣಿ 9ನೇ ದಿನಕ್ಕೆ  

ತಾಳಿಕೋಟಿ 11: ತಾಳಿಕೋಟಿ, ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ತಾಲೂಕುಗಳನ್ನು ಒಳಗೊಂಡಂತೆ ಇಡೀ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ 9ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ಧರಣಿ ಸ್ಥಳಕ್ಕೆ ತಾಳಿಕೋಟಿಯ ವಕೀಲರು ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ವಕೀಲ ಗಂಗಾಧರ ಕಸ್ತೂರಿ ಮಾತನಾಡಿ, ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದರೂ, ಅವರನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದು ವಿಷಾದನೀಯ. ತಾಳಿಕೋಟಿ, ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ತಾಲೂಕುಗಳು ಒಣ ಬೇಸಾಯ ಪ್ರದೇಶಗಳಾಗಿದ್ದು, ನೀರಾವರಿ ಸೌಲಭ್ಯವೂ ಕಡಿಮೆ ಇದೆ. ಮಳೆ ಕೈಕೊಟ್ಟಿರುವುದರಿಂದ ರೈತರು ಬಿತ್ತನೆಗೆ ಮಾಡಿದ ಖರ್ಚನ್ನೂ ಮರಳಿ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದರು. ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಕೂಡಲೇ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸುವಂತೆ ಅವರು ಒತ್ತಾಯಿಸಿದರು. ವಕೀಲರಾದ ಪ್ರಭಾಕರ ಗುಡಗುಂಟಿ ಹಾಗೂ ಸಂತೋಷ ತಳ್ಳೊಳ್ಳಿ ಮಾತನಾಡಿ, ರೈತರ ಹೋರಾಟದಲ್ಲಿ ಯಾವುದೇ ಸ್ವಾರ್ಥವಿಲ್ಲ. ಅನ್ನದಾತರನ್ನು ಬೀದಿಗೆ ತರುವ ಪರಿಸ್ಥಿತಿ ನಿರ್ಮಾಣವಾಗಿರುವುದು ನೋವಿನ ಸಂಗತಿ. ಸರ್ಕಾರ ಕೂಡಲೇ ಬರ ಘೋಷಣೆ ಮಾಡದಿದ್ದರೆ ರೈತರು ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಅಂತಹ ಹೋರಾಟಕ್ಕೆ ವಕೀಲರ ಸಂಪೂರ್ಣ ಬೆಂಬಲವಿರಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಎಂ.ಆರ್‌. ಪಾಟೀಲ, ಎಂ.ಬಿ. ಅಸ್ಕಿ, ಎಸ್‌.ಎಸ್‌. ಹಾಲಣ್ಣವರ, ಎಸ್‌.ಎಂ. ಕಿಣಗಿ, ಎಂ.ಬಿ. ಕಟ್ಟಿಮನಿ, ಸಿ.ಎಸ್‌. ಚಲವಾದಿ, ಎಂ.ಬಿ. ದೊಡ್ಡಮನಿ, ಬಸವರಾಜ ಕಟ್ಟಿಮನಿ, ಎಸ್‌.ಬಿ. ನಾರಿ ಸೇರಿದಂತೆ ರೈತ ಸಂಘದ ತಾಲೂಕು ಅಧ್ಯಕ್ಷ ಬಾಳಪ್ಪಗೌಡ ಲಿಂಗದಳ್ಳಿ, ಉಪಾಧ್ಯಕ್ಷ ರಾಮನಗೌಡ ಹದಿಮನಿ ಹಾಗೂ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.