ವಿಶ್ವ ರೋಬೋಟಿಕ್ಸ್‌ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ವಿಶೇಷ ಸಂದರ್ಶನ

 ವಿಶ್ವ ರೋಬೋಟಿಕ್ಸ್‌ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ವಿಶೇಷ ಸಂದರ್ಶನ  Exclusive interview with students who won first place in the World Robotics Championship

ಲೋಕದರ್ಶನ ವರದಿ 

ಹುಕ್ಕೇರಿ 12 : ವಿಶ್ವ ರೋಬೋಟಿಕ್ಸ್‌ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಸ್ಥಾನ ಪಡೆದು ಬೆಳಗಾವಿ ಜಿಲ್ಲೆಗೆ ಹೆಮ್ಮೆ ತಂದ ವಿದ್ಯಾರ್ಥಿಗಳಾದ ಸುಶಾಂತ ಲಕ್ಷ್ಮಪ್ಪ ಬಂಡಿವಡ್ಡರ ಹಾಗೂ ವಿಠ್ಠಲ ಮಲ್ಲಿಕಾರ್ಜುನ ಗದಗ ಅವರ ವಿಶೇಷ ಸಂದರ್ಶನ ಕಾರ್ಯಕ್ರಮ ತಾಲೂಕಿನ ನಮ್ಮೂರ ಬಾನುಲಿ 90.8 ಎಫ್‌.ಎಮ್    ಸಮುದಾಯ ರೇಡಿಯೋ ಕೇಂದ್ರದಲ್ಲಿ ನಡೆಯಿತು.  

ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಈ ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಹಿಂದೆ ಇರುವ ಪರಿಶ್ರಮ, ನಿರಂತರ ಅಭ್ಯಾಸ, ತಾಂತ್ರಿಕ ಜ್ಞಾನ ಮತ್ತು ಆತ್ಮವಿಶ್ವಾಸದ ಅನುಭವಗಳನ್ನು ಶ್ರೋತೃಗಳೊಂದಿಗೆ ಹಂಚಿಕೊಂಡರು. ವಿದ್ಯಾರ್ಥಿಗಳು ಬಾಲ್ಯದಿಂದಲೇ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಮೇಲಿನ ಆಸಕ್ತಿ ಬೆಳೆಸಿಕೊಂಡಿದ್ದು, ರೋಬೋಟಿಕ್ಸ್‌ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸನ್ನು ಸಾಕಾರಗೊಳಿಸಲು ನಡೆಸಿದ ಸತತ ಪ್ರಯತ್ನಗಳ ಕುರಿತು ವಿವರಿಸಿದರು.  

ಸಂದರ್ಶನದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ವಿಶ್ವ ರೋಬೋಟಿಕ್ಸ್‌ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವ ಅವಕಾಶ ದೊರೆತಿದ್ದು ತಮ್ಮ ಜೀವನದ ಮಹತ್ವದ ಘಟ್ಟವಾಗಿದ್ದು, ವಿವಿಧ ದೇಶಗಳ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಈ ಸಾಧನೆಗೆ ಕುಟುಂಬದ ಬೆಂಬಲ, ಶಿಕ್ಷಕರ ಮಾರ್ಗದರ್ಶನ ಹಾಗೂ ತರಬೇತುದಾರರ ಪ್ರೋತ್ಸಾಹ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.  

ಈ ವಿಶೇಷ ಸಂದರ್ಶನದಲ್ಲಿ ಅಪ್ಪಯ್ಯ ಮಠದ್, ವ್ಯವಸ್ಥಾಪಕರು, ಸ್ಟೀಮ್‌-ಎಚ್ ಟ್ರೇನಿಂಗ್ ಅಂಡ್ ರಿಸರ್ಚ್‌ ಸೆಂಟರ್, ಶಿವಬಸವ ನಗರ, ಬೆಳಗಾವಿ ಹಾಗೂ ದಯಾನಂದ ಬಸಗೌಡ ಮಗದುಮ್, ತರಬೇತಿ ಅಧಿಕಾರಿ, ಎಸ್‌ಎಸ್‌ಇಟಿ ಪ್ರೈ. ಐಟಿಐ, ಶಿವಬಸವ ನಗರ, ಬೆಳಗಾವಿ ಭಾಗವಹಿಸಿ ವಿದ್ಯಾರ್ಥಿಗಳ ಸಾಧನೆಯ ಹಿಂದೆ ನಡೆದ ತರಬೇತಿ ಪ್ರಕ್ರಿಯೆ, ತಾಂತ್ರಿಕ ಮಾರ್ಗದರ್ಶನ ಹಾಗೂ ಶ್ರಮದ ಕುರಿತು ವಿವರಿಸಿದರು.  

ಸಂಪನ್ಮೂಲ ವ್ಯಕ್ತಿಗಳು ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಪಠ್ಯಾಧಾರಿತ ಶಿಕ್ಷಣದ ಜೊತೆಗೆ ತಂತ್ರಜ್ಞಾನ, ವಿಜ್ಞಾನ ಹಾಗೂ ನವೋದ್ಯಮ ಕ್ಷೇತ್ರಗಳತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಹೊಸತನದ ಚಿಂತನೆ, ಸಮಸ್ಯೆ ಪರಿಹಾರ ಕೌಶಲ್ಯ ಹಾಗೂ ಸಂಶೋಧನಾ ದೃಷ್ಟಿಕೋನ ಬೆಳೆಸುವುದರಿಂದ ಭವಿಷ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣದ ಗುರಿಗಳು ಹಾಗೂ ಭವಿಷ್ಯದಲ್ಲಿ ತಂತ್ರಜ್ಞಾನ ಮತ್ತು ರೋಬೋಟಿಕ್ಸ್‌ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡುವ ಆಶಯವನ್ನು ವ್ಯಕ್ತಪಡಿಸಿದರು.  ಈ ವಿಶೇಷ ಸಂದರ್ಶನವನ್ನು ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ಉದ್ಘೋಷಕರಾದ ಆರ್‌.ಜೆ. ಚೇತನ ನಡೆಸಿಕೊಟ್ಟರು.