ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಆರೋಗ್ಯ ಕ್ಷೀಣಿಸುವಿಕೆ: ಹನುಮಂತಗೌಡ ಗೊಲ್ಲರ

ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಆರೋಗ್ಯ ಕ್ಷೀಣಿಸುವಿಕೆ: ಹನುಮಂತಗೌಡ ಗೊಲ್ಲರ Excessive use of mobile phones is causing deterioration in children's mental health: Hanumantha Gowd

ಹಾವೇರಿ 26 : ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳ ಮೊಬೈಲ್ ಬಳಕೆ ಪೋಷಕರನ್ನು ಸುಸ್ತು ಮಾಡಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕ್ಷೀಣಿಸುತ್ತಿದೆ. ಎಷ್ಟೋ ಮಕ್ಕಳು ಮೊಬೈಲ್ ಕೊಡದ್ದಕ್ಕೆ ಆತ್ಮಹತ್ಯೆಗೂ ಶರಣಾಗಿದ್ದಾರೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು. ತಾಲೂಕಿನ ಅಗಡಿ ಗ್ರಾಮದ ಶ್ರೀಮತಿ ಪುಟ್ಟಮ್ಮ ನೀಲಪ್ಪ ಶಿವಣ್ಣನವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 36ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಿ ಅವರು ಮಾತನಾಡಿದರು.

ವಯಸ್ಸಿನ ಭೇದವಿಲ್ಲದ ಎಲ್ಲ ವಯೋಮಾನದವರಲ್ಲೂ ಮೊಬೈಲ್ ಗೀಳು ಆತಂಕಕಾರಿಯಾಗಿ ಏರುತ್ತಿದೆ. ಅದರಲ್ಲೂ ಹೆಚ್ಚಿನ ಕೆಡುಕು ಕಾಣಿಸುತ್ತಿರುವುದು ಮಕ್ಕಳಲ್ಲಿ. ಹಠಮಾರಿತನ ಮನಸ್ಸಿನ ಕಾರಣದಿಂದಾಗಿ ಗದರಿ, ಬುದ್ಧಿಹೇಳಿ ಮಕ್ಕಳನ್ನು ಸರಿದಾರಿಗೆ ತರಲಾಗದ ಅಸಹಾಯಕತೆ ಪಾಲಕರಲ್ಲಿದೆ. ಅವರಿಗೆ ಮೊದಮೊದಲಿಗೆ ಪಾಲಕರೇ ಪ್ರೇರಣೆ. ಅವರದ್ದೇ ಅನುಸರಣೆ. ಹಾಗಾಗಿ ಮಗುವಿನಲ್ಲಿ ಬದಲಾವಣೆ ತರಬೇಕಿದ್ದಲ್ಲಿ ಅವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು.

ಯಾವುದಕ್ಕೂ ಬಲಾತ್ಕಾರವಾಗಿ ಹೇರದೆ ಕೆಡುಕುಗಳ ಬಗ್ಗೆ ತಾಳ್ಮೆಯಿಂದ ತಿಳಿಹೇಳಬೇಕು. ಆರೋಗ್ಯಕರ ಹವ್ಯಾಸ, ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಜೊತೆಗೆ ಚಿಕ್ಕವರನ್ನೂ ಭಾಗವಹಿಸುವಂತೆ ಹುರಿದುಂಬಿಸಿದಾಗ ಮಾತ್ರ ಸಕಾರಾತ್ಮಾಕ ಬದಲಾವಣೆ ಸಾಧ್ಯ. ವಿದ್ಯಾರ್ಜನೆ ಮಾಡಬೇಕಾದ ಅವರನ್ನು ಮೊಬೈಲ್ ಭೂತದಿಂದ ಹೊರತಂದು ಅವರನ್ನು ಪುಸ್ತಕ ಪ್ರೇಮಿಗಳನ್ನಾಗಿ ಮಾಡಬೇಕಾಗಿದೆ ಎಂದೂ ಹನುಮಂತಗೌಡ ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಶಂಭಣ್ಣ ಬಸೇಗಣ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ಶ್ರಮ ಸಾರ್ಥಕವಾಗಬೇಕಾದರೆ ತಾಯ್ತಂದೆಯರು ಮಕ್ಕಳಿಗೆ ಮಾದರಿಯಾಗಿ ಮನೆಯಲ್ಲಿ ಅಭ್ಯಾಸದ ವಾತಾವರಣ ನಿರ್ಮಾಣ ಮಾಡಬೇಕು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪಾಲಕರು, ಶಿಕ್ಷಕರು ಅವರ ಭವಿಷ್ಯವನ್ನು ರೂಪಿಸಬೇಕು. ಬರುವ ಶೈಕ್ಷಣಿಕ ವರ್ಷದಲ್ಲಿ 8ನೇ ವರ್ಗ ಆರಂಭಿಸಲಾಗುವುದು ಎಂದರು.

ಆಡಳಿತ ಮಂಡಳಿಯ ಶಿವಪುತ್ರ​‍್ಪ ಶಿವಣ್ಣನವರ, ಫಕ್ಕೀರಸ್ವಾಮಿ ನಿರ್ವಾಣಮಠ, ಬಸವಣ್ಣೆಪ್ಪ ಬಸೇಗಣ್ಣಿ, ಬಸವಂತಪ್ಪ ಮುಗದೂರ, ದೇವೇಂದ್ರ​‍್ಪ ಅಳ್ಳಳ್ಳಿ, ಫಕ್ಕೀರೇಶ ಬ್ಯಾಡಗಿ ಹಾಗೂ ರತ್ನವ್ವ ಪಾಟೀಲ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಶಿಕ್ಷಕ ಆರ್‌.ಕೆ.ಭಗವಂತಗೌಡ್ರ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಎಸ್‌.ವೈ.ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ ಕಡ್ಲಿ, ಶಿಕ್ಷಕಿ ಗೀತಾ ಬಡಿಗೇರ ನಿರೂಪಿಸಿದರು. ಶಿಕ್ಷಕಿ ಸುಜಾತಾ ಕುಲಕರ್ಣಿ ವಂದಿಸಿದರು.