ಗೃಹಜ್ಯೋತಿ ಪರೀಶೀಲನೆಗೆ ಎಲ್ಲರೂ ಸಹಕರಿಸಿ-ಅಧ್ಯಕ್ಷ ಸೈಯದ್ ಅಜೀಮಪೀರ್ ಖಾದ್ರಿ

ಗೃಹಜ್ಯೋತಿ ಪರೀಶೀಲನೆಗೆ ಎಲ್ಲರೂ ಸಹಕರಿಸಿ-ಅಧ್ಯಕ್ಷ ಸೈಯದ್ ಅಜೀಮಪೀರ್ ಖಾದ್ರಿ Everyone should cooperate with the Gruha Jyothi verification – Chairperson Syed Azeempeer Khadri

ಲೋಕದರ್ಶನ ವರದಿ 

          ಹಾವೇರಿ  03: ರಾಜ್ಯ ಸರ್ಕಾರದ ಮಹತ್ವಾಂಕ್ಷೆ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಫಲಾನುಭವಿಗಳ ದಾಖಲೆ ಪರೀಶೀಲನಾ ಕಾರ್ಯ ನಡೆಯುತ್ತಿದ್ದು, ಎಲ್ಲರೂ ಸಹಕರಿಸುವಂತೆ ಹೆಸ್ಕಾಂ ಅಧ್ಯಕ್ಷರಾದ ಸೈಯದ್ ಅಜೀಮ್ ಪೀರ್ ಎಸ್‌. ಖಾದ್ರಿ ಮನವಿ ಮಾಡಿದ್ದಾರೆ.  ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಮೆಹಬೂಬ್ ನಗರದಲ್ಲಿ ಗುರುವಾರ ಗೃಹಜ್ಯೋತಿ ಫಲಾನುಭವಿಗಳ ಪರೀಶೀಲನಾ ಕಾರ್ಯ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ರಾಜ್ಯದ ಜನರಿಗೆ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಇದೊಂದು ಯಶಸ್ವಿ ಯೋಜನೆಯಾಗಿದೆ ಎಂದರು.  

ಹೆಸ್ಕಾಂ ವ್ಯಾಪ್ತಿಯಲ್ಲಿ ಜುಲೈ 01ರಿಂದ ದಾಖಲೆಗಳ ಪರೀಶೀಲನೆಗಾಗಿ ಹೆಸ್ಕಾಂ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ. ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್‌, ಪಾಸ್ ಪೋರ್ಟ್‌ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್‌, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ) , ರೇಷನ್ ಕಾರ್ಡ್‌ ( ಪಡಿತರ ಚೀಟಿ) ಸೇರಿದಂತೆ ಇತರೆ ಅಗತ್ಯ ದಾಖಲೆಗಳನ್ನು ತೋರಿಸಬೇಕು. ಹೆಸ್ಕಾಂ ಸಿಬ್ಬಂದಿಯು ಮನೆ ಮಾಲೀಕರು ಅಥವಾ ಬಾಡಿಗೆದಾರರಿಂದ ಮಾಹಿತಿ ಪಡೆದು ಸೇವಾ ಸಿಂಧು ತಂತ್ರಾಂಶದಲ್ಲಿ ದಾಖಲಿಸಲಿದ್ದಾರೆ. ಸಾರ್ವಜನಿಕರು ಈ ಪ್ರಕ್ರಿಯೆಗೆ ಸಹಕರಿಸಬೇಕೆಂದು ಕೋರಿದರು.  ಫಲಾನುಭವಿಗಳ ದಾಖಲೆಗಳ ಪರೀಶೀಲನಾ ಕಾರ್ಯದ ಬಗ್ಗೆ ಜನರಿಗೆ ತಿಳಿ ಹೇಳಿದ ಅಧ್ಯಕ್ಷರು, ಸ್ವತಃ ತಾವೇ ಒಂದು ಅರ್ಜಿಯನ್ನು ಭರ್ತಿ ಮಾಡಿದರು. ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು, ಪಟ್ಟಣದ ಮುಖಂಡರು ಸೇರಿದಂತೆ ಹಲವರು ಹಾಜರಿದ್ದರು.