ಆತ್ಮಹತ್ಯೆ ತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು

ಆತ್ಮಹತ್ಯೆ ತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು  Everyone must join hands to prevent suicide

ಲೋಕದರ್ಶನ ವರದಿ 

  ಬೆಳಗಾವಿ 11: ಆತ್ಮಹತ್ಯೆ ತಡೆಗಟ್ಟುವಲ್ಲಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಆತ್ಮಹತ್ಯೆ ಕುರಿತು ಸಮಾಜದ ದೃಷ್ಟಿಕೋನ ಬದಲಾಗಬೇಕು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಗೀತಾ ಕಾಂಬಳೆ ಹೇಳಿದರು.  

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ ನಗರದ ಕೆ.ಎಲ್‌.ಎಸ್‌. ಗೋಗಟೆ ಕಾಲೇಜ್ ಆಫ್ ಕಾಮರ್ಸ್‌ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ 7.20 ಲಕ್ಷಕ್ಕೂ ಅಧಿಕ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ವೈಯಕ್ತಿಕ ಸಮಸ್ಯೆಯಷ್ಟೇ ಅಲ್ಲದೆ ಕುಟುಂಬ ಹಾಗೂ ಸಮಾಜದ ಮೇಲೆ ಪರಿಣಾಮ ಬೀರುವ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ ಎಂದರು.

ಮಾನಸಿಕ ಒತ್ತಡ, ಖಿನ್ನತೆ, ಆತಂಕ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಮಯೋಚಿತ ನೆರವು, ಬೆಂಬಲ ಹಾಗೂ ಪ್ರೋತ್ಸಾಹ ನೀಡುವುದು ಅಗತ್ಯ. ಮಾನಸಿಕ ಆರೋಗ್ಯದ ಕುರಿತು ಮುಕ್ತವಾಗಿ ಮಾತನಾಡುವ ಮೂಲಕ ಆತ್ಮಹತ್ಯೆ ತಡೆಗಟ್ಟಲು ಸಾಧ್ಯ ಎಂದು ಅವರು ತಿಳಿಸಿದರು.  

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎನ್‌. ಶಿವಕುಮಾರ ಮಾತನಾಡಿ, ಆತ್ಮಹತ್ಯೆ ಕುರಿತು ದೃಷ್ಟಿಕೋನ ಬದಲಿಸಿ, ಸಂವಾದ ಆರಂಭಿಸುವ ಅಗತ್ಯವಿದೆ.

ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಇರುವ ತಪ್ಪು ಕಲ್ಪನೆ ಹಾಗೂ ಕಳಂಕವನ್ನು ದೂರ ಮಾಡಿ, ಸಂಕಷ್ಟದಲ್ಲಿರುವವರಿಗೆ ಸಹಾನುಭೂತಿ ಮತ್ತು ಬೆಂಬಲ ನೀಡಬೇಕು ಎಂದು ಹೇಳಿದರು. ಲೇಕ್ವ್ಯೂ ಕಾಲೇಜ್ ಆಫ್ ನರ್ಸಿಂಗ್ನ ಸೈಯದ್ ಹಾಗೂ ತಂಡದವರು ಆತ್ಮಹತ್ಯೆ ತಡೆಗಟ್ಟುವಿಕೆ ಮತ್ತು ಟೆಲಿ-ಮಾನಸ್ 14416 ಕುರಿತು ಕಿರು ನಾಟಕ ಪ್ರದರ್ಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಲ್‌.ಎಸ್‌. ಗೋಗಟೆ ಕಾಲೇಜ್ ಆಫ್ ಕಾಮರ್ಸ್ನ ಕಾರ್ಯಾಧ್ಯಕ್ಷ ಆರ್‌.ಎಸ್‌. ಮುತಾಲಿಕ ಮಾತನಾಡಿ, ಜೀವನದಲ್ಲಿ ಸೋಲು-ಗೆಲುವು ಸಹಜ. ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ ಎಂಬ ಅರಿವು ಮೂಡಿಸಬೇಕು ಎಂದರು.  

ಕಾರ್ಯಕ್ರಮದಲ್ಲಿ ಡಾ. ವೇಣುಗೋಪಾಲ ಎಸ್‌. ಜಾಲಿಹಾಳ, ಡಾ. ನಾಗರಾಜ, ಮನೋವೈದ್ಯ ಡಾ. ಭೀಮಸೇನ ಟಕ್ಕಳಕಿ, ಡಾ. ಸುನೀಲ ಜಾಬಗಾಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಡಾ. ಪ್ರಕಾಶ ಮಾಣೆ ಕಾರ್ಯಕ್ರಮ ನಿರೂಪಿಸಿದರು.