ಸಮಾಜದ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ-ತಾಳಿಕೋಟಿ

ಸಮಾಜದ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ-ತಾಳಿಕೋಟಿ Everyone's cooperation is important for the development of society - Talikoti

ಲೋಕದರ್ಶನ ವರದಿ 

ಗೋಕಾಕ 07 :  ಸಮಾಜದ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಶಿವಶರಣ ಹರಳಯ್ಯ ಸಮಾಜದ ತಾಲೂಕಾಧ್ಯಕ್ಷ ಪುಂಡಲೀಕ ತಾಳಿಕೋಟಿ ಹೇಳಿದರು. ಅವರು ಸೋಮವಾರದಂದು ನಗರದ ಸಮಗಾರ ಗಲ್ಲಿಯಲ್ಲಿರುವ ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ, ಬಸವ, ಅಂಬೇಡ್ಕರರ 95ನೇ ವಾರ್ಷಿಕ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಾದರಕ್ಷೆ ಮಾಡುವ ಮತ್ತು ಮಾರಾಟ ಮಾಡುವ ನಮ್ಮ ಜನಾಂಗವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮಗಾರ ಸಮಾಜದ ಬಾಂಧವರು ಮುಂದೆ ಬರಬೇಕು. ಅದೆಷ್ಟೋ ಬಡ ಕೂಲಿಕಾರ್ಮಿಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕನಸು ಕಾಣುತ್ತಿದ್ದಾರೆ. ಸಮಾಜದ ಯುವ ಜನಾಂಗವು ಸುಸಂಸ್ಕೃತ,ಸತ್ಪ್ರಜೆಗಳಾಗಬೇಕು. ಸಮಾಜ ಅಭಿವೃದ್ದಿಗಾಗಿ ಶ್ರಮಿಸಬೇಕು, ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಹರಳಯ್ಯನವರ ತತ್ವದಾರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. 

ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ಜರುಗಿತು. ಸಮಾಜದ ಏಳ್ಗೆಗಾಗಿ ಶ್ರಮಿಸಿದ ಹಿರಿಯರನ್ನು ಹರಳಯ್ಯ ಸಮಾಜದ ಯುವಕರಿಂದ ಸನ್ಮಾನಿಸಿ ಗೌರವಿಸಲಾಯಿತು. 

 ಶಿವಶರಣ ಹರಳಯ್ಯನವರ ಹಾಗೂ ಬುದ್ದ, ಬಸವ, ಅಂಬೇಡ್ಕರರ ಭಾವಚಿತ್ರದ ಪಲ್ಲಕ್ಕಿ ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾವಾದ್ಯಮೇಳದೊಂದಿಗೆ ಹಾಗೂ ಸುಮಂಗಲಿಯ ಕುಂಭದೊಂದಿಗೆ ಭವ್ಯ ಮೆರವಣಿಗೆ ಜರುಗಿತು. ಶಿವಶರಣ ಹರಳಯ್ಯ ಸಮಾಜದ ಹಿರಿಯರು, ಯುವಕರು ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆ ಭಕ್ತ ಸಮುದಾಯ ಉಪಸ್ಥಿತರಿದ್ದರು.