ಉದ್ಯೋಗ ಖಾತರಿ ಜಾಗೃತಿ ಅಭಿಯಾನ

ಉದ್ಯೋಗ ಖಾತರಿ ಜಾಗೃತಿ ಅಭಿಯಾನ  Employment Guarantee Awareness Campaign


ಸವದತ್ತಿ ಸೆ.10: ತಾಲೂಕಿನ ಗೋರವನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯಡಿ ವಿವಿಜಿ ರಾಮ್ಜಿ ಯೋಜನೆ ಹಾಗೂ ಜಾಬ್ ಕಾರ್ಡ್‌ ಮೇಳದ ಕುರಿತು ಜನಜಾಗೃತಿ ಅಭಿಯಾನ ನಡೆಯಿತು.  

ಈ ವೇಳೆ ಹೊಸ ಜಾಬ್ ಕಾರ್ಡ್ಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಹೊಸ ಉದ್ಯೋಗ ಖಾತರಿ ಕಾರ್ಡ್ಗಳನ್ನು ವಿತರಿಸಲಾಯಿತು. ತಾಲೂಕು ಪಂಚಾಯಿತಿ ಐಇಸಿ ಸಂಯೋಜಕ ಮಲೀಕಜಾನ್ ಮೊಮಿನ್ ಮಾತನಾಡಿ, ಸೆ.15ರವರೆಗೆ ಜಾಬ್ ಕಾರ್ಡ್‌ ಮೇಳ ನಡೆಯಲಿದ್ದು, ಗ್ರಾಮೀಣ ಪ್ರದೇಶದ ಉದ್ಯೋಗದ ಅಗತ್ಯವಿರುವ ಅರ್ಹ ಕುಟುಂಬಗಳು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.  

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರಗೌಡ ಹೊಸಮನಿ ಮಾತನಾಡಿ, ಕೂಲಿ ಮೊತ್ತವನ್ನು 370ರಿಂದ 382ಕ್ಕೆ ಹೆಚ್ಚಿಸಲಾಗಿದ್ದು, ವಾರ್ಷಿಕ ಮಾನವ ದಿನಗಳ ಮಿತಿಯನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ವರ್ಷಕ್ಕೆ ಗರಿಷ್ಠ 47,750ರವರೆಗೆ ಕೂಲಿ ದೊರೆಯಲಿದೆ ಎಂದರು.  

ಹೊಸ ಯೋಜನೆಯಡಿ 318 ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳು, ಕೂಲಿ ಪಾವತಿ, ಹಾಜರಾತಿ, ಕೆಲಸದ ಅವಧಿ ಮತ್ತು ಜಾಬ್ ಕಾರ್ಡ್‌ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.  

ಈ ಸಂದರ್ಭದಲ್ಲಿ ಪಿಡಿಒ ಶಂಕರಗೌಡ ಹೊಸಮನಿ, ಮಲೀಕಜಾನ್ ಮೊಮಿನ್, ಭೀಮಪ್ಪ ಗೋರನಾಳ, ಅನಿಲ್ ಹಕಾರಿ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಗ್ರಾಮಸ್ಥರು ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.