ಲಾಕ್‌ಡೌನ್‌ ಪರಿಸ್ಥಿತಿ ದುರ್ಬಳಕೆ ಮಾಡಿ ಕಾರ್ಮಿಕರ ಮೇಲೆ ಮಾಲೀಕರ ದೌರ್ಜನ್ಯ- ಸಿಪಿಐಎಂ

ಬೆಂಗಳೂರು, ಏ.18, ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಜಾರಿ ಮಾಡಿರುವ ಲಾಕ್‌ಡೌನ್‌ ಪರಿಸ್ಥಿತಿಯನ್ನು ಮಾಲೀಕರು ದುರ್ಬಳಕೆ ಮಾಡಿಕೊಂಡು ಕಾರ್ಮಿಕರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ತಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಕಾರ್ಯದರ್ಶಿ ಯು.ಬಸವರಾಜು ಒತ್ತಾಯಿಸಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಾರ್ಚ್ 24 ರಂದು ಪ್ರಧಾನ ಮಂತ್ರಿ ಲಾಕ್‌ಡೌನ್ ಪ್ರಕಟಿಸುವಾಗ ಈ ಅವಧಿಯಲ್ಲಿ ಮಾಲಕರು ಯಾರನ್ನೂ ಕೆಲಸದಿಂದ ತೆಗೆದು ಹಾಕಬಾರದು, ಸಂಬಳ ಕಡಿತ ಮಾಡಬಾರದು, ಅಥವಾ ನಿರ್ವಾಹವಿಲ್ಲದೆ ಕೆಲಸಕ್ಕೆ ಗೈರು ಹಾಜರಾದರೆ ಅದಕ್ಕೆ ಶಿಕ್ಷಾ ಕ್ರಮ ಕೈಗೊಳ್ಳಬಾರದು ಎಂದು ಹೇಳಿದ್ದರು.
ಅದರಂತೆ, ಕೇಂದ್ರ ಗೃಹ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಈ ಕುರಿತಂತೆ ನಿರ್ದೇಶನಾವಳಿಗಳನ್ನು, ಸಲಹಾ ಪತ್ರಗಳನ್ನು ಕಳಿಸಿದ್ದವು.  ಆದರೇ ಮಾಲೀಕರು, ಪ್ರಧಾನಿಗಳು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳ ಮನವಿಗಳೂ ಸೇರಿದಂತೆ ಯಾವುದನ್ನೂ ಲೆಕ್ಕಿಸದೆ ದೇಶ ಮತ್ತು ರಾಜ್ಯಾದ್ಯಂತ ಬಹಳಷ್ಟು ಕಡೆಗಳಲ್ಲಿ ಕಾರ್ಮಿಕರಿಗೆ ಮಾರ್ಚ್ ತಿಂಗಳ ಸಂಬಳವನ್ನು ನೀಡದೇ ಮನವಿಯನ್ನು ಉಲ್ಲಂಘಿಸಿದ್ದಾರೆ. ಕೊಟ್ಟಿರುವ ಕೆಲವೆಡೆ ಕಡಿತಗಳನ್ನು ಮಾಡಿದ್ದಾರೆ. ಮುಖ್ಯವಾಗಿ, ಎಲ್ಲ ಸಂಘಟಿತ ವಲಯದ ಉದ್ದಿಮೆಗಳ ಗುತ್ತಿಗೆ, ತಾತ್ಕಾಲಿಕ ಕೆಲಸಗಾರರು ಇದನ್ನು ಅನುಭವಿಸಬೇಕಾಗಿ ಬಂದಿದೆ. ಹಲವೆಡೆ ಕೆಲಸದಿಂದಲೂ ತೆಗೆದು ಹಾಕಿದ್ದಾರೆ. ಕೆಲವೆಡೆಗಳಲ್ಲಿ ನಿಯಮಿತ ಕಾರ್ಮಿಕರನ್ನೂ ತೆಗೆದು ಹಾಕಿದ್ದಾರೆ ಎಂದು ಅವರು ಆರೋಪಿಸಿದರು.
ಸಾರ್ವಜನಿಕ ವಲಯದಲ್ಲೂ ಹಲವೆಡೆಗಳಲ್ಲಿ ಗುತ್ತಿಗೆ ಮತ್ತು ಕ್ಯಾಶುವಲ್ ಕಾರ್ಮಿಕರನ್ನು ತೆಗೆದು ಹಾಕಲಾಗಿದೆ. ಈಗ ಲಾಕ್‌ಡೌನ್ ಮತ್ತೆ ಮೂರು ವಾರ, ಯಾವುದೇ ಪರಿಹಾರದ ಪ್ರಕಟಣೆಯಿಲ್ಲದೇ ಮುಂದುವರಿದಿರುವುದರಿಂದ ಏಪ್ರಿಲ್ ತಿಂಗಳ ಸಂಬಳವೂ ಸಿಗುವ ಸಂಭವವಿಲ್ಲ, ಜತೆಗೆ ಉದ್ಯೋಗ, ಆದಾಯ, ಬದುಕು ಕಳಕೊಳ್ಳುವವರ ಸಂಖ್ಯೆ ಮತ್ತಷ್ಟು ಹೆಚ್ಚಿದೆ.ಇದು ಹೀಗಿರುವಾಗಲೇ, ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ಮಾಡಿ ದಿನದ ಕೆಲಸದ ಅವಧಿಯನ್ನು ಹಾಲಿ 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಮಾಲೀಕರ ಸಂಘಗಳು ಸರಕಾರಗಳ ಮುಂದಿರಿಸಿವೆ ಎಂದು ಅವರು ಆರೋಪಿಸಿದರು.
ಮಾಲೀಕರ ಸಂಘಗಳು ಲಾಕ್‌ ಡೌನ್ ಕಾಲಾವಧಿಯ ವೇತನ ನೀಡುವ ಹೊಣೆಗಾರಿಕೆಯಿಂದ ನುಣಿಚಿಕೊಳ್ಳಲು, ರಾಷ್ಟ್ರದ 3.5 ಕೋಟಿ ಇ.ಎಸ್.ಐ. ಸೌಲಭ್ಯವಿರುವ ಕಾರ್ಮಿಕರಿಗೆ ಇ.ಎಸ್.ಐ. ನಿಂದ 75 ಶೇಕಡ ವೇತನ ನೀಡಬೇಕೆಂದಿವೆ. ಅದರಂತೆ ಇಎಸ್‌ಐ ನಲ್ಲಿರುವ 85000 ಸಾವಿರ ಕೋಟಿ ರೂ.ಗಳ ನಿಧಿ ಬಳಸಿ 2 ತಿಂಗಳ ವೇತನ ನೀಡಲು ಸೂಚಿಸಿವೆ.
ಮಾಲೀಕರ ಸಂಘಗಳು ತಮ್ಮ ಮತ್ತೊಂದು ಪ್ರಸ್ತಾಪದಲ್ಲಿ ಗುತ್ತಿಗೆ ಮತ್ತು ಹಂಗಾಮಿ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ನಿಧಿಯಿಂದ ವೇತನ ನೀಡಲು ಕೋರಿವೆ. ಸೆಸ್ ಕಾಯ್ದೆ ಪ್ರಕಾರ ಕಟ್ಟಡ ಕಾರ್ಮಿಕರಲ್ಲದವರಿಗೆ ಅದರ ಕಲ್ಯಾಣ ನಿಧಿ ಬಳಕೆ ಮಾಡುವಂತಿಲ್ಲ.
ದೇಶ ಮತ್ತು ರಾಜ್ಯದಾದ್ಯಂತ ಕೋವಿಡ್-19 ವೈರಾಣು ವಿರುದ್ಧದ ಹೋರಾಟವನ್ನು ಅತ್ಯಂತ ಸಂಕಷ್ಟದ ಸಂದರ್ಭದಲ್ಲೂ ಕಾರ್ಮಿಕ ವರ್ಗ ಮುಂದುವರೆಸಿರುವಾಗ, ಮಾಲೀಕ ವರ್ಗ ಹಿಂಬದಿಯಿಂದ ಬೆನ್ನಿಗೆ ಹಿರಿಯುವ ಮತ್ತೊಂದು ದಾಳಿಗೆ ಮುಂದಾಗಿರುವುದನ್ನು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಲೀಕ ವರ್ಗದ ಜೊತೆ ಕೈ ಜೋಡಿಸುವ ಪ್ರಸ್ತಾಪಗಳನ್ನು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದವರು ತಿಳಿಸಿದರು.
ಈ ಎಲ್ಲ ಕಾರ್ಮಿಕರು ಲಾಕ್‌ಡೌನ್ ಅವಧಿಯಲ್ಲಿನ ವೇತನಕ್ಕಾಗಿ ಮತ್ತು ಉದ್ಯೋಗ ಕಳೆದುಕೊಳ್ಳುವ ಅಪಾಯವನ್ನು ತಪ್ಪಿಸಬೇಕೆಂದು ಸರಕಾರಗಳ ಕಡೆ ಮೊರೆ ಇಟ್ಟಿರುವಾಗ ಮಾಲೀಕ ವರ್ಗದ ಈ ಪಿತೂರಿ ಅತ್ಯಂತ ಹೇಯ ಮತ್ತು ಅಮಾನವೀಯವಾಗಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಪ್ರಸ್ತಾಪಗಳನ್ನು ಕೂಡಲೇ ಸಾರಸಗಟಾಗಿ ತಿರಸ್ಕರಿಸಬೇಕೆಂದು ಸಿಪಿಐ(ಎಂ) ರಾಜ್ಯ ಸಮಿತಿ ಬಲವಾಗಿ ಆಗ್ರಹಿಸುತ್ತದೆ. ಅದೇ ರೀತಿ, ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ತಕ್ಷಣವೇ ಕೈ ಬಿಡುವಂತೆ ಒತ್ತಾಯಿಸುತ್ತದೆ.ದೇಶದಾದ್ಯಂತ ಕಾರ್ಮಿಕ ವರ್ಗ ಹಾಗೂ ರೈತ-ಕೂಲಿಕಾರ ಜನತೆ ದಿನಾಂಕ ಏಪ್ರಿಲ್ 21 ರಂದು "ಭಾಷಣ ಸಾಕು- ನೆರವು ಬೇಕು" ಎಂಬ ಘೋಷಣೆಯಡಿ ತಮ್ಮ ಹಕ್ಕೊತ್ತಾಯಗಳಿಗಾಗಿ ಮನೆ ಮುಂದೆಯೆ ಅಥವಾ ಮನೆಯಲ್ಲಿಯೇ ಪ್ರತಿಭಟನೆ ನಡೆಸಲು ಕರೆ ನೀಡಿವೆ. ಈ ಕರೆಯನ್ನು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಸಂಪೂರ್ಣವಾಗಿ ಬೆಂಬಲಿಸುತ್ತದೆ ಮತ್ತು ಪಕ್ಷದ ಸದಸ್ಯರು, ಬೆಂಬಲಿಗರು, ರೈತರು, ಕೂಲಿಕಾರರು ಮತ್ತು ಕಾರ್ಮಿಕರು ಈ ಕರೆ ಯಶಸ್ವಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.