ಈದ್ ಮಿಲಾದ್ ಮೆರವಣಿಗೆ: ಸೌಹಾರ್ದ, ಸಹೋದರತ್ವದ ಸಂದೇಶ

ಈದ್ ಮಿಲಾದ್ ಮೆರವಣಿಗೆ: ಸೌಹಾರ್ದ, ಸಹೋದರತ್ವದ ಸಂದೇಶ  Eid Milad procession: A message of amity, brotherhood


ರಾಣೇಬೆನ್ನೂರು, 26: ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ಮಾನವನೂ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ ಹಾಗೂ ಅಭಿಮಾನದಿಂದ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.  

ನಗರದ ಪ್ರಧಾನ ಅಂಚೆ ಕಚೇರಿ ಬಳಿ ಬುಧವಾರ ನಡೆದ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವುದೇ ಧರ್ಮ, ಜಾತಿ ಹಾಗೂ ಮತದ ವಿರುದ್ಧ ದ್ವೇಷದ ಭಾವನೆ ಬೆಳೆಸಬಾರದು. ಎಲ್ಲ ಧರ್ಮಗಳ ಸಾರವೂ ಒಂದೇ ಆಗಿದ್ದು, ಪ್ರೀತಿ ಹಾಗೂ ವಿಶ್ವಾಸದಿಂದ ಪರಸ್ಪರ ಅನ್ಯೋನ್ಯವಾಗಿ ಬದುಕಬೇಕು ಎಂದರು.  ನಾವೆಲ್ಲರೂ ಅಣ್ಣತಮ್ಮಂದಿರಂತೆ ಒಗ್ಗಟ್ಟಿನಿಂದ ಉತ್ತಮ ಜೀವನ ನಡೆಸುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.  

ಸಂಭ್ರಮದಿಂದ ನಡೆದ ಮೆರವಣಿಗೆ  

ಬೆಳಿಗ್ಗೆ 8 ಗಂಟೆಗೆ ಜನತಾ ಬಜಾರ್ ಬಳಿಯ ಜುಮ್ಮಾ ಮಸೀದಿ ಆವರಣದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಸೇರಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ಅಲ್ಲಿಂದ ಮೆರವಣಿಗೆ ಆರಂಭಗೊಂಡಿತು.  ಮೆರವಣಿಗೆಯು ಎಂಜಿ ರಸ್ತೆ, ಪ್ರಧಾನ ಅಂಚೆ ಕಚೇರಿ, ಬಸ್ಸ್ಟ್ಯಾಂಡ್ ರಸ್ತೆ ಹಾಗೂ ಟಿಬಿ ರಸ್ತೆ ಮೂಲಕ ಸಾಗಿ ಕೋಟೆ ಬಾಗಿಲು ಬಳಿ ಸಮಾಪ್ತಿಗೊಂಡಿತು.  

ಮೆರವಣಿಗೆಯಲ್ಲಿ ಪುಚ್ಛಪ್ಪ ಮರಿಯಮ್ಮನವರ, ಹನುಮಂತಪ್ಪ ಕಬ್ಬಾರ, ರವೀಂದ್ರಗೌಡ ಪಾಟೀಲ, ಅಂಜುಮನ್ ಇಸ್ಲಾಂ ಸಮಿತಿಯ ಗಣ್ಯರಾದ ಎಚ್‌.ಎಫ್‌. ಬಿದರಿ, ಶೇರುಖಾನ್ ಕಾಬೂಲಿ, ಇರ್ಫಾನ್ ದಿಡಗೂರು, ನೂರುಲ್ಲಾ ಖಾಜಿ, ಎಂ.ಕೆ. ಮೊಹಿದ್ದೀನ್, ಸನಾವುಲ್ಲಾ ಕುಂದೂರು, ಬಶೀರ್ ಅಹ್ಮದ್ ಕರ್ಜಗಿ, ವೈರೂಜ್ ಖಾನ್ ಟಿ.ಎನ್‌. ಮೇಕರ್, ಸದ್ದಾಂ ಖಾಜಿ, ನೂರುಲ್ಲಾ ಪಠಾಣ್, ಅಲ್ತಾಫ್ ಖಂದಾರಿ, ಇಜಾಜ್ ಸೌದಾಗರ್, ಫಯಾಜ್ ಮುಲ್ಲಾ, ಜುಮ್ಮಣ್ಣಿ ಅತ್ತಾರ, ಭಾಷಾ ಸಾಹೇಬ್ ನೀಲಗಾರ, ಭಕ್ಷುಸಾಬ್ ನೀಲಗಾರ ಸೇರಿದಂತೆ ಸಮಾಜದ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.  

ಈದ್ ಮಿಲಾದ್ ನಿಮಿತ್ತ ಸಾರ್ವಜನಿಕರಿಗೆ ಹಣ್ಣು, ತಂಪು ಪಾನೀಯ, ಬಾಳೆಹಣ್ಣು, ಬಿಸ್ಕಿಟ್ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.  ಮೆರವಣಿಗೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್‌ ವ್ಯವಸ್ಥೆ ಕೈಗೊಂಡಿದ್ದರು.