ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆಗೆ ಚಾಲನೆ

ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆಗೆ ಚಾಲನೆ E-auction process for excise licenses launched

ಬಳ್ಳಾರಿ 13: ರಾಜ್ಯ ಸರ್ಕಾರ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಎಲ್‌-2ಎ ಹಾಗೂ ಸಿಎಲ್‌-9ಎ ಸನ್ನದುಗಳ ಇ-ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹರಾಜಿನಲ್ಲಿ ಭಾಗವಹಿಸುವವರು ಕೇವಲ ಬಳ್ಳಾರಿ ಅಥವಾ ವಿಜಯನಗರ ಜಿಲ್ಲೆಗಳಿಗೆ ಸೀಮಿತರಾಗದೆ ರಾಜ್ಯದ ಯಾವುದೇ ಜಿಲ್ಲೆಯಿಂದ ಬಿಡ್ ಸಲ್ಲಿಸಬಹುದು ಎಂದು ಬಳ್ಳಾರಿ ಜಿಲ್ಲಾ ಅಬಕಾರಿ ಉಪ ಆಯುಕ್ತ ಮಂಜುನಾಥ್ ಎನ್‌. ತಿಳಿಸಿದ್ದಾರೆ.  ರಾಜ್ಯ ಅಬಕಾರಿ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಅಬಕಾರಿ ಇಲಾಖೆಯ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಆಸಕ್ತ ಬಿಡ್ದಾರರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.  

ರಾಜ್ಯಾದ್ಯಂತ ಸುಮಾರು 483 ಸಿಎಲ್‌-2ಎ ಹಾಗೂ 90ಕ್ಕೂ ಹೆಚ್ಚು ಸಿಎಲ್‌-9ಎ ಸನ್ನದುಗಳನ್ನು ಇ-ಹರಾಜು ಮೂಲಕ ನೀಡಲು ಸರ್ಕಾರ ಉದ್ದೇಶಿಸಿದೆ. ಸಿಎಲ್‌-2ಎ ಪರವಾನಗಿಗಳು ಮದ್ಯ ಮಾರಾಟ ಮಳಿಗೆಗಳಿಗೆ (ವೈನ್ ಸ್ಟೋರ್ಗಳು) ಸಂಬಂಧಿಸಿದವು.ಇಲ್ಲಿ ಖರೀದಿಸಿದ ಮದ್ಯವನ್ನು ಬೇರೆಡೆ ಸೇವಿಸಲು ಮಾತ್ರ ಅವಕಾಶವಿರುತ್ತದೆ. ಸಿಎಲ್‌-9ಎ ಪರವಾನಗಿಗಳು ಮಹಾನಗರ ಪಾಲಿಕೆ ವ್ಯಾಪ್ತಿಯ ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ಸಂಬಂಧಿಸಿದ್ದು, ಆಹಾರದೊಂದಿಗೆ ಮದ್ಯ ಪೂರೈಕೆಗೆ ಅವಕಾಶ ಕಲ್ಪಿಸುತ್ತವೆ ಎಂದು ವಿವರಿಸಿದರು.  

ಬಳ್ಳಾರಿ ಜಿಲ್ಲೆಯಲ್ಲಿ 10 ಸಿಎಲ್‌-2ಎ ಹಾಗೂ 2 ಸಿಎಲ್‌-9ಎ ಸನ್ನದುಗಳಿಗೆ ಇ-ಹರಾಜು ನಡೆಯಲಿದೆ. ಹರಾಜಿನಲ್ಲಿ ಭಾಗವಹಿಸಲು ಆಸಕ್ತರು ಎಂಎಸ್ಟಿಸಿ  ಅಧಿಕೃತ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆನ್ಲೈನ್ ವಾಲೆಟ್ನಲ್ಲಿ ಇಎಂಡಿ  ಮೊತ್ತವನ್ನು ಜಮಾ ಮಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.  ಬಳ್ಳಾರಿ ಜಿಲ್ಲೆಯ ಇ-ಹರಾಜು ಜುಲೈ 28ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಆಸಕ್ತರು ಜುಲೈ 26ರೊಳಗೆ ನೋಂದಣಿ ಹಾಗೂ ಶುಲ್ಕ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಮೊಬೈಲ್ ಅಥವಾ ಉತ್ತಮ ಇಂಟರ್ನೆಟ್ ಸಂಪರ್ಕವಿರುವ ಡೆಸ್ಕ್ಟಾಪ್ ಅಥವಾ ಲ್ಯಾಪ್ಟಾಪ್ ಮೂಲಕ ಮನೆಯಲ್ಲಿಯೇ ಕುಳಿತು ಆನ್ಲೈನ್ ಬಿಡ್ ಸಲ್ಲಿಸಬಹುದಾಗಿದೆ ಎಂದು ಹೇಳಿದರು.