ಚರಂಡಿ ನೀರು ಕೃಷಿಭೂಮಿಗೆ ಸೇರುತ್ತಿದೆ: ರೈತರಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ

ಚರಂಡಿ ನೀರು ಕೃಷಿಭೂಮಿಗೆ ಸೇರುತ್ತಿದೆ: ರೈತರಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ  Drainage water flowing into agricultural land: Farmers submit memorandum to Municipal Chief Officer

ಲಕ್ಷ್ಮೇಶ್ವರ, ಜು.21: ಸಮೀಪದ ಅಡರಕಟ್ಟಿ ಗ್ರಾಮದ ನೂರಾರು ಎಕರೆ ಕೃಷಿಭೂಮಿಗೆ ಚರಂಡಿ ನೀರು ಹರಿದು ಬೆಳೆಗಳಿಗೆ ಹಾನಿಯಾಗುತ್ತಿರುವುದನ್ನು ತಕ್ಷಣ ತಡೆಗಟ್ಟುವಂತೆ ಒತ್ತಾಯಿಸಿ ರೈತರು ಹಾಗೂ ರೈತ ಸಂಘಟನೆಗಳ ಮುಖಂಡರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.  ಅಡರಕಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ರೈತರು ಪ್ರತಿಭಟನಾ ಸಭೆ ನಡೆಸಿ, ಚರಂಡಿ ನೀರು ಕೃಷಿಭೂಮಿಗೆ ಸೇರುತ್ತಿರುವುದರಿಂದ ಜಮೀನು ಹಾಳಾಗುತ್ತಿದ್ದು, ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.  

ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯಾಧ್ಯಕ್ಷ ಬಿ.ಟಿ. ಚಂದ್ರಶೇಖರ್ ಮಾತನಾಡಿ, ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಹಿಡಿಯಬೇಕು. ಇಲ್ಲವಾದಲ್ಲಿ ಗ್ರಾಮದಿಂದ ತಹಶೀಲ್ದಾರ್ ಕಚೇರಿ ಹಾಗೂ ಪುರಸಭೆಯವರೆಗೆ ಪಾದಯಾತ್ರೆ ಸೇರಿದಂತೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗ್ರಾಮದ ಹಿರಿಯರ ಮನವಿಯ ಮೇರೆಗೆ ಸದ್ಯ ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರಿಗೆ ರೈತರು ಮನವಿ ಸಲ್ಲಿಸಿ, ಚರಂಡಿ ನೀರು ಕೃಷಿಭೂಮಿಗೆ ಹರಿಯದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.  

ಸಮಗ್ರ ರೈತ ಹೋರಾಟ ಸಂಘಟನೆಯ ಮುಖಂಡ ಮಂಜುನಾಥ ಮಾಗಡಿ ಮಾತನಾಡಿ, ಹಲವು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನೂರಾರು ಎಕರೆ ಫಲವತ್ತಾದ ಜಮೀನು ಹಾನಿಯಾಗುತ್ತಿದ್ದು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.  ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸದಿದ್ದರೆ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ರೈತರು ಎಚ್ಚರಿಕೆ ನೀಡಿದರು.  ಪ್ರತಿಭಟನೆಯಲ್ಲಿ ಗ್ರಾಮದ ಹಿರಿಯರು, ರೈತ ಮುಖಂಡರು ಹಾಗೂ ನೂರಾರು ರೈತರು ಭಾಗವಹಿಸಿದ್ದರು.