ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆದರ್ಶಗಳು ಯುವಜನತೆಗೆ ಸ್ಫೂರ್ತಿ

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆದರ್ಶಗಳು ಯುವಜನತೆಗೆ ಸ್ಫೂರ್ತಿ    Dr. Syama Prasad Mookerjee's ideals are an inspiration to the youth

ಬೀದರ್  06:  ಭಾರತೀಯ ಜನಸಂಘದ ಸಂಸ್ಥಾಪಕರು, ಪ್ರಖರ ರಾಷ್ಟ್ರವಾದಿ, ಶಿಕ್ಷಣತಜ್ಞ ಹಾಗೂ ದೇಶದ ಅಖಂಡತೆಗಾಗಿ ತಮ್ಮ ಜೀವನವನ್ನೇ ಸಮರ​‍್ಿಸಿದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನವನ್ನು ಸೋಮವಾರ ಬೀದರ್ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಬಳಿಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಉಸ್ತುವಾರಿ ಗುರುನಾಥ ಜ್ಯಾಂತಿಕರ್ ಅವರು, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ರಾಷ್ಟ್ರದ ಏಕತೆ, ಅಖಂಡತೆ ಹಾಗೂ ಸಾಂಸ್ಕೃತಿಕ ರಾಷ್ಟ್ರೀಯತೆಯ ಪ್ರತೀಕವಾಗಿದ್ದರು ಎಂದು ಹೇಳಿದರು.ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರವಾಗಿದೆ.

ರಾಷ್ಟ್ರೀಯ ಹಿತಾಸಕ್ತಿ, ಸಾಂವಿಧಾನಿಕ ಮೌಲ್ಯಗಳು ಹಾಗೂ ದೇಶದ ಸಮಗ್ರತೆಯ ವಿಚಾರದಲ್ಲಿ ಅವರು ಪ್ರದರ್ಶಿಸಿದ ಅಚಲ ಬದ್ಧತೆ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿದಾಯಕವಾಗಿದೆ. ರಾಷ್ಟ್ರದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದ ಅವರ ಜೀವನ ಮತ್ತು ಚಿಂತನೆಗಳು ಇಂದಿಗೂ ದೇಶಭಕ್ತರಿಗೆ ಮಾರ್ಗದರ್ಶನ ನೀಡುತ್ತಿವೆ ಎಂದು ಅವರು ತಿಳಿಸಿದರು.ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ಇಂದಿನ ಯುವಜನತೆ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ದೇಶಪ್ರೇಮ, ಶಿಸ್ತು, ಸೇವಾ ಮನೋಭಾವ ಹಾಗೂ ರಾಷ್ಟ್ರೀಯ ಚಿಂತನೆಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. "ರಾಷ್ಟ್ರ ಮೊದಲು" ಎಂಬ ಧ್ಯೇಯದೊಂದಿಗೆ ಅವರು ಬದುಕಿದ ಆದರ್ಶಗಳು ಪ್ರತಿಯೊಬ್ಬ ಕಾರ್ಯಕರ್ತನಿಗೂ ಮಾದರಿಯಾಗಿದ್ದು, ದೇಶದ ಅಭಿವೃದ್ಧಿ ಹಾಗೂ ಸುಭದ್ರತೆಗೆ ಅವರ ಚಿಂತನೆಗಳು ಸದಾ ಪ್ರೇರಣೆಯಾಗಿವೆ ಎಂದು ಹೇಳಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಅವರು ಮಾತನಾಡಿ, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜೀವನ, ಹೋರಾಟ ಮತ್ತು ರಾಷ್ಟ್ರಸೇವೆಯ ಸಂದೇಶವನ್ನು ಕಾರ್ಯಕರ್ತರು ಮನೆಮನೆಗೆ ತಲುಪಿಸುವ ಮೂಲಕ ರಾಷ್ಟ್ರಭಕ್ತಿ, ಸೇವಾ ಮನೋಭಾವ ಹಾಗೂ ರಾಷ್ಟ್ರೀಯ ಮೌಲ್ಯಗಳನ್ನು ಸಮಾಜದಲ್ಲಿ ಮತ್ತಷ್ಟು ಬಲಪಡಿಸಬೇಕು ಎಂದು ತಿಳಿಸಿದರು. ಅವರ ಆದರ್ಶಗಳನ್ನು ಅನುಸರಿಸುವ ಮೂಲಕ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪುರೆ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಮುಖಂಡರಾದ ಬಾಬುರಾವ ಕಾರಬಾರಿ, ರಾಜಶೇಖರ ನಾಗಮೂರ್ತಿ, ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು, ಹಿರಿಯ ಮುಖಂಡರು, ಜನಪ್ರತಿನಿಧಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.